ಉತ್ತರಾಖಂಡ:ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದಿರುವ 41 ಮಂದಿ ಕಾರ್ಮಿಕರು ಕ್ರಿಸ್‌ಮಸ್ ಹಬ್ಬದ ವೇಳೆಗೆ ಸುರಕ್ಷಿತವಾಗಿ ಮರಳಿ ಮನೆ ಸೇರಲಿದ್ದಾರೆ ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಶನಿವಾರ ಭರವಸೆ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಯಾವಾಗ ಯಶಸ್ವಿಯಾಗುತ್ತದೆ ಎಂಬ ಕುರಿತು ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, "ಇನ್ನೂ ಒಂದು ತಿಂಗಳು ತೆಗೆದುಕೊಳ್ಳಬಹುದು. ಆದಾಗ್ಯೂ ನಿಖರವಾಗಿ ಹೇಳಲಾರೆ. ನನ್ನ ಪ್ರಕಾರ, ನಾವು ಆತುರಪಡಬಾರದು. ಎಲ್ಲರೂ ಸುರಕ್ಷಿತವಾಗಿ ಮನೆಗೆ ಬರುತ್ತಾರೆ ಎಂಬ ವಿಶ್ವಾಸವಿದೆ" ಎಂದರು. ಇದೇ ವೇಳೆ, ಕಾರ್ಯಾಚರಣೆ ಯಾವಾಗ ಕೊನೆಗೊಳ್ಳುತ್ತದೆ ಎಂದು ನಿಗದಿತ ಸಮಯ ಮಿತಿ ಹೇಳಲು ಡಿಕ್ಸ್ ನಿರಾಕರಿಸಿದರು.
"ರಕ್ಷಣಾ ಕಾರ್ಯಾಚರಣೆ ಸುಗಮ, ತ್ವರಿತವಾಗಿ ಕೊನೆಗೊಳ್ಳುತ್ತವೆ ಎಂದು ನಾನು ಎಂದಿಗೂ ಭರವಸೆ ನೀಡಲಿಲ್ಲ. ಇಂದು ರಾತ್ರಿ ಅಥವಾ ನಾಳೆಯೊಳಗೆ ಕಾರ್ಯಾಚರಣೆ ಮುಗಿಯುತ್ತದೆ ಎಂದು ಹೇಳಿಲ್ಲ. ಅವರೆಲ್ಲಾ ಕ್ರಿಸ್‌ಮಸ್ ಸಮಯದ ವೇಳೆಗೆ ಮನೆಗೆ ಬರುತ್ತಾರೆ ಎಂಬ ಭರವಸೆ ನನ್ನದು. ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ" ಎಂದು ಹೇಳಿದರು.
ಶನಿವಾರ ಮುಂಜಾನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಸೈಯದ್ ಅತಾ ಹಸ್ನೈನ್, "ಸುರಂಗ ರಕ್ಷಣಾ ಕಾರ್ಯಾಚರಣೆಗೆ ಬಳಸಿರುವ ಡ್ರಿಲ್ಲಿಂಗ್ ಮಷಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಸರಿಪಡಿಸಿ ರಕ್ಷಣಾ ಕಾರ್ಯ ಮುಂದುವರಿಸಲಾಗುವುದು. ನಮ್ಮ ರಕ್ಷಕರು ಅನಿರೀಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ" ಎಂದು ಮಾಹಿತಿ ನೀಡಿದರು.