ಲಕ್ನೋ(ಉತ್ತರ ಪ್ರದೇಶ):ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು 40 ಕಾರ್ಮಿಕರು ಕಾರ್ಮಿಕರು ಪ್ರಾಣಭಯದಲ್ಲಿ ಸಿಲುಕಿದ್ದರು. ಈ ಪೈಕಿ ಉತ್ತರಪ್ರದೇಶದ 8 ಮಂದಿ ಕಾರ್ಮಿಕರಿದ್ದಾರೆ. ಆದಷ್ಟು ಬೇಗ ಇವರನ್ನು ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ ಎಂದು ಉತ್ತರಪ್ರದೇಶದ ಸರ್ಕಾರ ತಿಳಿಸಿದೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಪೈಕಿ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯ ಆರು, ಲಖಿಂಪುರ ಖೇರಿ ಮತ್ತು ಮಿರ್ಜಾಪುರ ಜಿಲ್ಲೆಯ ತಲಾ ಒಬ್ಬರು ಇದ್ದಾರೆ. ಈ ಮೂರು ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಡಳಿತ ಆಯಾ ಕಾರ್ಮಿಕರ ಕುಟುಂಬಗಳನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದೆ. ಕುಟುಂಬಸ್ಥರಿಗೆ ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ನವೆಂಬರ್ 12ರಭಾನುವಾರ ಮುಂಜಾನೆ ಉತ್ತರಖಂಡದಬ್ರಹ್ಮಖಾಲ್ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ 21 ಮೀಟರ್ನಷ್ಟು ಕುಸಿತವಾಗಿತ್ತು. ಸುರಂಗ ಮಾರ್ಗದ ದುರಸ್ತಿಗೆ ವಿವಿಧೆಡೆಯಿಂದ 40 ಮಂದಿ ಕಾರ್ಮಿಕರು ತೆರಳಿದ್ದರು. ಈ ವೇಳೆ, ಸುರಂಗದ ಮತ್ತೊಂದು ಭಾಗ ಕುಸಿದಿತ್ತು. ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಕಳೆದ ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.