ಉತ್ತರಕಾಶಿ (ಉತ್ತರಾಖಂಡ) :ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಭಾರತೀಯ ಸೇನೆ ಹಾಗೂ ರಕ್ಷಣಾ ಸಿಬ್ಬಂದಿ ಸೇರಿ ಸುರಕ್ಷಿತವಾಗಿ ರಕ್ಷಿಸಿ ಅವರವರ ಮನೆಗಳಿಗೆ ಬಿಟ್ಟಿದ್ದಾರೆ. ಇದೀಗ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರೊಬ್ಬರು ತಾವು ಎದುರಿಸಿದ ಸವಾಲುಗಳೇನು? ಎಂಬುದನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ 17 ದಿನಗಳವರೆಗೆ ಕಾರ್ಮಿಕರು ಹೇಗೆ ಕಳೆದರು ಎಂಬುದನ್ನು ಎಲ್ಲರೂ ತಿಳಿಯಲು ಬಯಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾರ್ಮಿಕರೊಬ್ಬರು ಇದೀಗ ಹಂಚಿಕೊಂಡಿರುವ ಮಾಹಿತಿಯ ವಿಡಿಯೋವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋ ಕಳೆದ ಕೆಲವು ದಿನಗಳಿಂದ ಸುರಂಗದೊಳಗೆ ಸಿಲುಕಿದ್ದ ಕೆಲಸಗಾರರಿಂದ ಚಿತ್ರೀಕರಿಸಲ್ಪಟ್ಟಂತೆ ಕಂಡುಬರುತ್ತಿದೆ. ಸುರಂಗದೊಳಗೆ ಅವಘಡ ಸಂಭವಿಸಿದ ದಿನದಿಂದ ಸುಮಾರು 17 ದಿನಗಳವರೆಗೆ 41 ಕಾರ್ಮಿಕರು ಹೇಗೆಲ್ಲಾ ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂಬುದನ್ನು ಕಾರ್ಮಿಕರೊಬ್ಬರು ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಅವರು ಎಷ್ಟು ದೂರದಿಂದ ನೀರು ತರಬೇಕು? ಅವರು ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಸುರಂಗದಲ್ಲಿ ಮಲಗುತ್ತಿದ್ದರು?. ಅವರು ಪೈಪ್ ಮೂಲಕ ಆಹಾರವನ್ನು ಹೇಗೆ ಪಡೆಯುತ್ತಿದ್ದರು? ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ಸುರಂಗದ ಒಳಗಿಂದಲೇ ವಿಡಿಯೋ : ಈ ವಿಡಿಯೋ ನೋಡಿದರೆ ಸುರಂಗದೊಳಗೆ ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಕೂಡಾ ಕಾರ್ಮಿಕರು ಧೈರ್ಯದಿಂದ ವಾಸವಾಗಿದ್ದರು ಎಂಬುದನ್ನು ಸುಲಭವಾಗಿ ಅಂದಾಜಿಸಬಹುದು. ಇದು ಸುರಂಗದ ಒಳಗೆ ಕೆಲಸಗಾರರು ಸಿಲುಕಿದ ಎಂಟನೇ ಅಥವಾ ಒಂಬತ್ತನೇ ದಿನದ ವಿಡಿಯೋ ಎಂಬುದು ತಿಳಿದುಬಂದಿದೆ.