ಕರ್ನಾಟಕ

karnataka

ETV Bharat / bharat

ಉತ್ತರಕಾಶಿ ಸುರಂಗ ಕುಸಿತ.. ಅವಶೇಷಗಳಡಿ ಸಿಲುಕಿದ ಮಂಡಿ ಜಿಲ್ಲೆಯ ವಿಶಾಲ್​.. ಕುಟುಂಬಸ್ಥರ ಗೋಳಾಟ - ಈಟಿವಿ ಭಾರತ್ ಕನ್ನಡ ಸುದ್ದಿ

ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತ ಸಂಭವಿಸಿದ್ದು, ಅವಶೇಷಗಳಡಿ ಮಂಡಿ ಜಿಲ್ಲೆಯ ವಿಶಾಲ್ ಸಹ ಸಿಲುಕಿದ್ದಾರೆ.

ಅವಶೇಷಗಳಡಿ ಸಿಲುಕಿದ ಮಂಡಿ ಜಿಲ್ಲೆಯ ವಿಶಾಲ್​
ಅವಶೇಷಗಳಡಿ ಸಿಲುಕಿದ ಮಂಡಿ ಜಿಲ್ಲೆಯ ವಿಶಾಲ್​

By ETV Bharat Karnataka Team

Published : Nov 16, 2023, 8:41 PM IST

ಮಂಡಿ (ಉತ್ತರಾಖಂಡ): ಇಲ್ಲಿನ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿದು ಕಳೆದ ಐದು ದಿನಗಳಿಂದ 40 ಕಾರ್ಮಿಕರು ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಕಾರ್ಮಿಕರನ್ನು ಹೊರಕ್ಕೆ ಕರೆತರಲಾಗಿಲ್ಲ. ಹೀಗೆ ಕುಸಿತದಲ್ಲಿ ಸಿಲುಕಿದ ಜನರಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಂಗೋಟ್ ಗ್ರಾಮದ ವಿಶಾಲ್ ಕೂಡ ಸೇರಿದ್ದಾರೆ. ಅವರು ಸುರಂಗದಲ್ಲಿ ಸಿಲುಕಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ವಿಶಾಲ್ ತಾಯಿ ಊರ್ಮಿಳಾ ದೇವಿ ಮಗನನ್ನು ಉಳಿಸಿಕೊಡುವಂತೆ ಅಳಲು ತೋಡಿಕೊಂಡಿದ್ದಾರೆ. ವಿಶಾಲ್ ಅವರ ಸುರಕ್ಷತೆಗಾಗಿ ಕುಟುಂಬದ ಸದಸ್ಯರೆಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ವಿಶಾಲ್​ ಕುಟುಂಬಸ್ಥರು

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ವಿಶಾಲ್​ :ಉತ್ತರಕಾಶಿಯಲ್ಲಿ ನಿರ್ಮಾಣವಾಗುತ್ತಿರುವ ಸುರಂಗದಲ್ಲಿ ವಿಶಾಲ್ ಸಿಲುಕಿದ ಸುದ್ದಿ ತಿಳಿದ ತಕ್ಷಣ ಸಂಬಂಧಿಕರು ಅವರ ಮನೆಗೆ ಬರಲಾರಂಭಿಸಿದ್ದಾರೆ. ವಿಶಾಲ್ ಹೇಗಾದರೂ ಸುರಕ್ಷಿತವಾಗಿ ಹೊರಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಅವಘಡದ ನಡೆದು ಐದು ದಿನ ಕಳೆದಿದ್ದರೂ ಸುರಂಗದಿಂದ ಯಾರೊಬ್ಬರನ್ನು ಹೊರಗೆ ಕರೆತರಲು ಸಾಧ್ಯವಾಗಿಲ್ಲ. ಹೀಗಾಗಿ ಆದಷ್ಟು ಬೇಗ ರಕ್ಷಣಾ ಕಾರ್ಯ ಚುರುಕುಗೊಳಿಸಿ ಒಳಗಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಕುಟುಂಬಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಶಾಲ್​ ಕುಟುಂಬಸ್ಥರು

ಈ ಬಗ್ಗೆ ವಿಶಾಲ್ ಅವರ ತಾಯಿಯ ಚಿಕ್ಕಪ್ಪ ಪರಮದೇವ್ ಅವರು ಮಾತನಾಡಿ, ವಿಶಾಲ್ ಅವರ ಹಿರಿಯ ಸಹೋದರ ಯೋಗೇಶ್ ಮತ್ತು ತಂದೆ ಧರಂ ಸಿಂಗ್ ಘಟನಾ ಸ್ಥಳದಲ್ಲಿದ್ದಾರೆ. ಅವರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ. ಇದರಿಂದ ಕುಟುಂಬದವರ ಚಿಂತೆ ಹೆಚ್ಚಾಗುತ್ತಿದೆ. ಒಮ್ಮೆ ನಾನು ವಿಶಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈಗ ಅವರು ಸುರಂಗದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಹೋದರರಿಬ್ಬರೂ ಒಂದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ : ವಿಶಾಲ್ ಮತ್ತು ಅವರ ಅಣ್ಣ ಯೋಗೇಶ್ ಒಂದೇ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರರಿಬ್ಬರೂ ಇಲ್ಲಿ ಯಂತ್ರ ನಿರ್ವಾಹಕರಾಗಿದ್ದಾರೆ. ದೀಪಾವಳಿಗೂ ಮುನ್ನ ಅವರಿಬ್ಬರು​ ರಜೆ ತೆಗೆದುಕೊಂಡು ಮನೆಗೆ ಬಂದಿದ್ದರು. ನಂತರ ಹಬ್ಬ ಮುಗಿಸಿಕೊಂಡು ವಿಶಾಲ್ ಕೆಲಸಕ್ಕೆ ತೆರಳಿದ್ದರು. ಆದರೆ, ಈ ವೇಳೆ ಅಲ್ಲಿ ಅವಘಡ ಸಂಭವಿಸಿ ವಿಶಾಲ್ ಸುರಂಗದಲ್ಲಿ ಸಿಲುಕಿದ್ದಾರೆ. ಈ ಮಾಹಿತಿಯನ್ನು ಪಡೆದ ನಂತರ ಯೋಗೇಶ್ ತಕ್ಷಣ ತಂದೆಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಇಬ್ಬರೂ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಇಬ್ಬರೂ ವಿಶಾಲ್ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ.

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ. ಜತೆಗೆ ಆಹಾರ ಪದಾರ್ಥಗಳನ್ನೂ ಕಳುಹಿಸಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ನಿಯೋಜಿಸಲಾಗಿದೆ. ಇದೇ ವೇಳೆ, ಇಂದು ವಾಯುಸೇನೆಯ ಡ್ರಿಲ್ಲಿಂಗ್ ಯಂತ್ರದಿಂದ ಸುರಂಗದಲ್ಲಿ ಪಥ ನಿರ್ಮಿಸುವ ಕಾರ್ಯ ನಡೆಯುತ್ತಿದೆ. 5 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :ಉತ್ತರಕಾಶಿ ಸುರಂಗ ಕುಸಿತ: ಅವಶೇಷಗಳಡಿ ಸಿಲುಕಿರುವ 8 ಕಾರ್ಮಿಕರು ಸುರಕ್ಷಿತ

ABOUT THE AUTHOR

...view details