ಉತ್ತರಕಾಶಿ (ಉತ್ತರಾಖಂಡ):ಉತ್ತರಾಖಂಡದ ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಕಾರ್ಯ ಪೂರ್ಣಗೊಂಡಿದೆ. ಸುರಂಗದ ಒಂದು ಭಾಗ ಕುಸಿದು ಒಳಗೆ ಸಿಲುಕಿದ್ದ 17 ದಿನಗಳ ನಂತರ ಮಂಗಳವಾರ ಎಲ್ಲ ಕಾರ್ಮಿಕರನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಪವಾಡ ಸದೃಶ ರೀತಿಯಲ್ಲಿ ಕಾರ್ಮಿಕರು ಪಾರಾಗಿದ್ದು, ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಅಧಿಕಾರಿಗಳು ಕಾರ್ಮಿಕರನ್ನು ಬರಮಾಡಿಕೊಂಡರು. ಇಷ್ಟು ದಿನ ಆತಂಕ, ದುಗುಡದಿಂದ ಕೂಡಿದ್ದ ಘಟನಾ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ.
ಚಾರ್ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಭೂಮಿ ಕೊರೆಯುವ ಯಂತ್ರಗಳು ಹಲವು ಬಾರಿ ಕೆಟ್ಟು ನಿಂತಿತ್ತು. ಇದರಿಂದಾಗಿ ಮನುಷ್ಯ ಸಾಮರ್ಥ್ಯದಿಂದಲೇ ರ‍್ಯಾಟ್ ರಂಧ್ರ ಕೊರೆಯುವ ಕಾರ್ಯ ನಡೆಸಲಾಗಿತ್ತು. ಸುಮಾರು 60 ಮೀಟರ್ ಕೊರೆಯಲಾಗಿದ್ದು, ಇಂದು ಅಂತಿಮವಾಗಿ ಸುರಂಗದೊಳಗೆ ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿತ್ತು.
ಅವಶೇಷಗಳ ದಾಟಿ ಯಶಸ್ವಿಯಾಗಿ ಪೈಪ್ ಒಳಹೋಗಿತ್ತು. ಮನುಷ್ಯ ಸಾಮರ್ಥ್ಯದಿಂದಲೇ ಕೊರೆದಿರುವುದರಿಂದ ಪೈಪ್ ಸುರಂಗದ ಒಳಗೆ ಹೋಗಿದೆ. ರಾತ್ರಿ 8 ಗಂಟೆಗೆ ಕಾರ್ಮಿಕರನ್ನು ಹೊರ ಬರಲು ಅನುಮತಿಸುವ ಮೊದಲು ಪೈಪ್‌ಗಳನ್ನು ಪದೇ ಪದೇ ಪರಿಶೀಲಿಸಲಾಯಿತು. ನಂತರ ಎಲ್ಲ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯ ಆರಂಭವಾಯಿತು. ಇದರಿಂದ ಕಾರ್ಮಿಕರ ಕುಟುಂಬಸ್ಥರ ಪ್ರಾರ್ಥನೆಗಳ ಫಲಿಸಿವೆ. ಜೊತೆಗೆ ಇಂದು ಬೆಳಗ್ಗೆ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಕೂಡ ಕಾರ್ಮಿಕರ ಸುರಕ್ಷತೆಗಾಗಿ ಸಿಲ್ಕ್ಯಾರಾ ಸುರಂಗದ ಹೊರಗಿನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ಸನ್ನದ್ಧ ಸ್ಥಿತಿಯಲ್ಲಿ ಆ್ಯಂಬುಲೆನ್ಸ್ಗಳು: ಕಾರ್ಮಿಕರ ರಕ್ಷಣೆಗೆ ಕ್ಷಣಗಣನೆ ಶುರುವಾದ ಕೂಡಲೇ ಸ್ಥಳದಲ್ಲಿ ಆ್ಯಂಬುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸುರಂಗದೊಳಗೆ ಪ್ರಾಥಮಿಕ ಆರೈಕೆಗಾಗಿ ಹಾಸಿಗೆಗಳನ್ನೂ ಸಿದ್ಧಪಡಿಸಲಾಗಿತ್ತು. ಸುರಂಗದಿಂದ ಹೊರಬಂದ ಕೂಡಲೇ ಎಲ್ಲರನ್ನೂ ಆ್ಯಂಬುಲೆನ್ಸ್ಗಳಿಗೆ ಸಾಗಿಸಲಾಗಿತು. ಕಾರ್ಮಿಕರನ್ನು ಈ ರಸ್ತೆಗಳ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಿ ಸಿದ್ಥಪಡಿಸಲಾಗಿದೆ.