ರೂರ್ಕಿ (ಉತ್ತರಾಖಂಡ):ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದು ಮಹಾ ಶಿವರಾತ್ರಿಯ ಪ್ರಯುಕ್ತ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಅಲ್ಲದೇ, ಕೆಲ ಗ್ರಾಮಸ್ಥರು ಮನೆ ಹೊರಗೆ ತಮ್ಮ ಮನೆಗಳು ಮಾರಾಟಕ್ಕಿದೆ ಎಂಬ ಪೋಸ್ಟರ್ಗಳು ಅಂಟಿಸಿ ಸಿಟ್ಟು ಹೊರಹಾಕಿದ್ದಾರೆ.
ಹರಿದ್ವಾರದ ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಾದಾ ಜಲಾಲ್‌ಪುರ ಗ್ರಾಮದಲ್ಲಿ ಈ ಬಾರಿ ಮಹಾ ಶಿವರಾತ್ರಿಯಂದು ಮೆರವಣಿಗೆ ನಡೆಸಲು ಗ್ರಾಮಸ್ಥರು ಆಡಳಿತದಿಂದ ಅನುಮತಿ ಕೇಳಿದ್ದರು. ಆದರೆ, ಕಳೆದ ವರ್ಷ ಎಪ್ರಿಲ್‌ನಲ್ಲಿ ಗ್ರಾಮದಲ್ಲಿ ಹನುಮ ಜಯಂತಿಯಂದು ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಮತ್ತು ಅಧಿಕಾರಿಗಳು ಸಾಕಷ್ಟು ಹರಸಾಹಸ ಪಡಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಮಹಾ ಶಿವರಾತ್ರಿಯಂದು ಮೆರವಣಿಗೆ ನಡೆಸಲು ಸ್ಥಳೀಯ ಆಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ, ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಸಭೆ ನಡೆಸಿ, ಮನವರಿಕೆ ಮಾಡಿಕೊಟ್ಟು ಮೆರವಣಿಗೆ ನಡೆಸಿದಂತೆ ಮನವಿ ಮಾಡಿದ್ದರು. ಆದರೂ, ಗ್ರಾಮಸ್ಥರು ತಮ್ಮ ಪಟ್ಟು ಸಡಿಸಲಿಸದೇ ಮೆರವಣಿಗೆ ನಡೆಸಲು ಸಜ್ಜಾಗಿದ್ದರು. ಹೀಗಾಗಿ ಜಿಲ್ಲಾಡಳಿತವು ಶುಕ್ರವಾರ ತಡ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದೆ.
ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ:ಮಹಾ ಶಿವರಾತ್ರಿಯ ಪ್ರಯುಕ್ತ ಮೆರವಣಿಗೆಗೂ ನಿರ್ಬಂಧ ಹೇರಿರುವ ಜಿಲ್ಲಾಡಳಿತ, ಶುಕ್ರವಾರ ತಡ ರಾತ್ರಿಯಿಂದ ಶನಿವಾರ ರಾತ್ರಿ 9 ಗಂಟೆಯವರೆಗೆ ಸೆಕ್ಷನ್ 144ರಡಿ ನಿಷೇಧಾಜ್ಞೆ ವಿಧಿಸಿದೆ. ಜಲಾಲ್‌ಪುರ ಗ್ರಾಮದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.