ನವದೆಹಲಿ: ಉತ್ತರಾಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸುರಂಗ ಕುಸಿತದಿಂದ 41 ಮಂದಿ ಕಾರ್ಮಿಕರು ಕಳೆದೊಂದು ವಾರದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಜೀವ ಉಳಿಸಲು ಬೃಹತ್ ಡ್ರಿಲ್ಲಿಂಗ್ ಯಂತ್ರವನ್ನು ಇಂದೋರ್ನಿಂದ ಉತ್ತರಾಖಂಡಕ್ಕೆ ವಾಯುಪಡೆಯ ಗ್ಲೋಬ್ ಮಾಸ್ಟರ್ ವಿಮಾನದ ಮೂಲಕ ರವಾನಿಸಲಾಗಿದೆ.
ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಮತ್ತು ದಾಂಡಲ್ ಗ್ರಾಮಗಳನ್ನು ಸಂಪರ್ಕಿಸಲು ಈ ಸುರಂಗ ಮಾರ್ಗ ನಿರ್ಮಿಸಲಾಗುತ್ತಿತ್ತು. ಕಳೆದ ಭಾನುವಾರ ಅವಘಡ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಸುಮಾರು ನಲುವತ್ತೊಂದು ಕಾರ್ಮಿಕರು ಸುರಂಗದಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಹೊರಗಿನಿಂದ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾರ್ಮಿಕರ ಪ್ರಾಣ ಉಳಿಸಲು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಸಹಾಯವಾಗಲು ಇಂದೋರ್‌ನಲ್ಲಿರುವ ಪಿಜೆ ಸೂದ್ ಕನ್‌ಸ್ಟ್ರಕ್ಷನ್ ಕಂಪನಿಯು ಪ್ರಸ್ತುತ ಆಗರ್ ಡ್ರಿಲ್ಲಿಂಗ್ ಮಷಿನ್ ಕಳುಹಿಸಿಕೊಟ್ಟಿದೆ.
ಈ ಯಂತ್ರವು ಸುಮಾರು 22 ಟನ್ಗಳಷ್ಟು ಭಾರವಿದ್ದು, ತಕ್ಷಣ ಉತ್ತರಾಖಂಡಕ್ಕೆ ಕೊಂಡೊಯ್ಯುವುದು ಕಷ್ಟವಾಗಿತ್ತು. ಆದ್ದರಿಂದ, ಭಾರತ ಸರ್ಕಾರದ ಸೂಚನೆಯ ಮೇರೆಗೆ ಭಾರತೀಯ ವಾಯುಪಡೆಯ C17A ಗ್ಲೋಬ್ ಮಾಸ್ಟರ್ ವಿಮಾನವನ್ನು ಇಂದೋರ್‌ಗೆ ಕಳುಹಿಸಲಾಗಿತ್ತು. ಇದರಲ್ಲಿ ಯಂತ್ರವನ್ನು ಉತ್ತರಾಖಂಡದ ಡೆಹ್ರಾಡೂನ್‌ಗೆ ಲೋಡ್ ಮಾಡಿ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಈ ಯಂತ್ರದೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆ: ಇನ್ನೊಂದೆಡೆ, ಭಾಗಶಃ ಕುಸಿದಿರುವ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ವಿವಿಧ ಉಪಾಯಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿತು. ಈ ಸಂದರ್ಭದಲ್ಲಿ ವಿವಿಧ ಏಜೆನ್ಸಿಗಳಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ. ತಾಂತ್ರಿಕ ಸಲಹೆಯ ಆಧಾರದ ಮೇಲೆ ಐದು ರಕ್ಷಣಾ ಆಯ್ಕೆಗಳನ್ನು ಸಭೆಯಲ್ಲಿ ಪರಿಶೋಧಿಸಲಾಯಿತು.
"NHIDCL, ONGC, SJVNL, THDC ಮತ್ತು RVNL ಗೆ ತಲಾ ಒಂದು ಆಯ್ಕೆಯನ್ನು ನಿಗದಿಪಡಿಸಲಾಗಿದೆ. BRO ಮತ್ತು ಭಾರತೀಯ ಸೇನೆಯ ನಿರ್ಮಾಣ ವಿಭಾಗ ಕೂಡ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹಾಗೆಯೇ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್‌ಎಚ್‌ಐಡಿಸಿಎಲ್) ಎಂಡಿ ಮಹಮ್ಮದ್ ಅಹ್ಮದ್ ಅವರನ್ನು ಎಲ್ಲಾ ಕೇಂದ್ರೀಯ ಸಂಸ್ಥೆಗಳೊಂದಿಗೆ ಸಮನ್ವಯ ನಡೆಸುವ ಉಸ್ತುವಾರಿ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಿಲ್ಕ್ಯಾರಾದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಸ್ಥಳದಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲಾ ಸಹಕಾರ ಮಾಡುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ನವೆಂಬರ್ 12 ರಂದು ಘಟನೆ ಜರುಗಿದ ಬಳಿಕ, NDRF, SDRF, NHIDCL, RVNL, SJVNL ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಏಜೆನ್ಸಿಗಳ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ್ನಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತ: 36 ಮಂದಿ ಸಿಲುಕಿರುವ ಶಂಕೆ