ಡೆಹ್ರಾಡೂನ್ (ಉತ್ತರಾಖಂಡ) :ಉತ್ತರಕಾಶಿಯಲ್ಲಿ ಸುರಂಗದ ಒಂದು ಭಾಗ ಕುಸಿದು 40 ಕಾರ್ಮಿಕರು ಸಿಲುಕಿಕೊಂಡ ಘಟನೆಯನ್ನು ತನಿಖೆ ಮಾಡಲು ಉತ್ತರಾಖಂಡ ಸರ್ಕಾರ 6 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಅಲ್ಲದೇ, ಸುರಂಗದಲ್ಲಿ ಸಿಲುಕಿರುವ ಅಷ್ಟೂ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಕ್ಷಣಾ ಪಡೆಗಳು ದೊಡ್ಡ ಪೈಪ್‌ಗಳ ಸಹಾಯದಿಂದ ಸುರಂಗದೊಳಗಿನ ಕಾರ್ಮಿಕರಿಗೆ ಆಹಾರ, ನೀರು ಮತ್ತು ಆಮ್ಲಜನಕವನ್ನು ಒದಗಿಸುತ್ತಿದ್ದಾರೆ. ಸಿಲ್ಕ್ಯಾರಾ ಸುರಂಗ ಕುಸಿತದ ಕಾರಣಗಳನ್ನು ತನಿಖೆ ಮಾಡಲು ಭೂಕುಸಿತ ತಗ್ಗಿಸುವಿಕೆ ಮತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿದ ತಂಡ ಸುರಂಗ ಮಾರ್ಗ ಹಾಗೂ ಅದರ ಮೇಲಿನ ಬೆಟ್ಟವನ್ನು ಪರಿಶೀಲನೆ ನಡೆಸಿದೆ.
ತಜ್ಞರ ತಂಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡೆಹ್ರಾಡೂನ್‌ನ ನಿರ್ದೇಶಕ ಶಾಂತನು ಸರ್ಕಾರ್, ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿ ಖೈಂಗ್ ಶಿಂಗ್ ಲುರೈ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ವಿಜ್ಞಾನಿ ಸುನಿಲ್ ಕುಮಾರ್ ಯಾದವ್, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಹಿರಿಯ ವಿಜ್ಞಾನಿ ರೂರ್ಕಿ ಕೌಶಿಲ್ , ಭೂವಿಜ್ಞಾನ ಮತ್ತು ಖನಿಜಶಾಸ್ತ್ರ ಇಲಾಖೆಯ ಉಪ ನಿರ್ದೇಶಕ ಜಿಡಿ ಪ್ರಸಾದ್ ಮತ್ತು ಯುಎಸ್ಡಿಎಂಎ ಭೂವಿಜ್ಞಾನಿ ತಂದ್ರಿಲಾ ಸರ್ಕಾರ್ ಇದ್ದಾರೆ. ಇವರ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.