ಡೆಹ್ರಾಡೂನ್(ಉತ್ತರಾಖಂಡ): ಮೆಕ್ಡೊನಾಲ್ಡ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವಕ ಪ್ರದೀಪ್ ಮೆಹ್ರಾ, ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿಲೋ ಮೀಟರ್ ಓಡುತ್ತಲೇ ಮನೆ ಸೇರುವ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಪ್ರದೀಪ್ ಮೆಹ್ರಾ ತಾಯಿಗೆ ದೆಹಲಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಭಾರತೀಯ ಸೇನೆ ಸೇರುವ ಉದ್ದೇಶದಿಂದ ಈ ಯುವಕ ಪ್ರತಿದಿನ 10 ಕಿಲೋ ಮೀಟರ್ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈತನ ತಾಯಿ ಅನಾರೋಗ್ಯಪೀಡಿತರಾಗಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆತನೇ ಹೇಳಿಕೊಂಡಿದ್ದ. ಇದೀಗ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಹಾಯಹಸ್ತ ಚಾಚಿದ್ದು, ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆ ನೀಡಿದೆ.