ಡೆಹ್ರಾಡೂನ್ :ಕೊರೊನಾ ಸಾಂಕ್ರಾಮಿಕ ರೋಗವು ದೇಶದ ಆರ್ಥಿಕತೆಯ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದೆ. ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟಗಳಂತಹ ಅನೇಕ ಸಮಸ್ಯೆಗಳು ಕೊರೊನಾದಿಂದ ಉಂಟಾಗಿವೆ. ಆದ್ರೆ, ಇದರ ನಡುವೆ ಕೆಲವು ರಾಜಕಾರಣಿಗಳ ಆದಾಯ ಮಾತ್ರ ದುಪ್ಪಟ್ಟಾಗಿದೆ.
ನಾವಿಲ್ಲಿ ಹೇಳ್ತಿರೋದು ಫೆಬ್ರವರಿ 14ರಂದು ನಡೆಯಲಿರುವ ಉತ್ತರಾಖಂಡದ ಚುನಾವಣೆ ಬಗ್ಗೆ. ಕಳೆದ ಚುನಾವಣೆ ನಂತರ ಇಲ್ಲಿನ ಹಲವಾರು ಅಭ್ಯರ್ಥಿಗಳ ಆದಾಯವು ದುಪ್ಪಟ್ಟಾಗಿದೆ. ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರ ಆದಾಯ ಹೆಚ್ಚಾಗಿರುವುದು ಕಂಡು ಬಂದಿದೆ. ಇದು ವಿಚಿತ್ರವೆನಿಸಿದರೂ ಸತ್ಯ. ನಮ್ಮ ರಾಜಕಾರಣಿಗಳು ಸಮಾಜ ಸೇವೆಯನ್ನು ಎಷ್ಟು ಲಾಭದಾಯಕವಾಗಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ರಾಜಕಾರಣಿಗಳ ಸಂಪತ್ತಿನಲ್ಲಿ ಶೇ.60ರಷ್ಟು ಹೆಚ್ಚಳ :ಐದು ವರ್ಷಗಳಲ್ಲಿ ಉತ್ತರಾಖಂಡದ ರಾಜಕಾರಣಿಗಳ ಸಂಪತ್ತಿನಲ್ಲಿ ಶೇ.60ರಷ್ಟು ಹೆಚ್ಚಳ ಕಂಡು ಬಂದಿದೆ. ನಮ್ಮ ಈಟಿವಿ ಭಾರತವು ಕೆಲವು ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ಕ್ಯಾನ್ ಮಾಡಿದ ನಂತರ ಕಳೆದ ಐದು ವರ್ಷಗಳಲ್ಲಿ ಅವರ ಸಂಪತ್ತು ಶೇ.60ರಷ್ಟು ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ.
ಕಳೆದ 5 ವರ್ಷಗಳಲ್ಲಿ ಸಂಪತ್ತನ್ನು ಶೇ.60ರಷ್ಟು ಹೆಚ್ಚಿಸಿಕೊಂಡಿರುವ ಅಭ್ಯರ್ಥಿಗಳಲ್ಲಿ ಯಶ್‌ಪಾಲ್ ಆರ್ಯ ಕೂಡ ಒಬ್ಬರು. 2017ರಲ್ಲಿ ₹9.57 ಕೋಟಿಯಷ್ಟಿದ್ದ ಅವರ ಸಂಪತ್ತು 2022ರಲ್ಲಿ ₹15.49 ಕೋಟಿ ಆಗಿದೆ.
ಇದನ್ನೂ ಓದಿ:ದೇಶದ ಭ್ರಷ್ಟಾಚಾರ ತೊಡೆದು ಹಾಕಲು ಜನರು ಒಟ್ಟಾಗಿ ಕೆಲಸ ಮಾಡಬೇಕು : ಮೋದಿ ಮನ್ ಕಿ ಬಾತ್
ನೈನಿತಾಲ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಯಶ್‌ಪಾಲ್ ಆರ್ಯ ಪುತ್ರ ಸಂಜೀವ್ ಆರ್ಯ, 2017ರಲ್ಲಿ ಚರಾಸ್ತಿ 60 ಲಕ್ಷ ಮತ್ತು ಸ್ಥಿರಾಸ್ತಿ 1.75 ಕೋಟಿ ಎಂದು ಘೋಷಿಸಿದ್ದರು. ಈಗ ಚರಾಸ್ತಿ 2.42 ಕೋಟಿ ಹಾಗೂ ಸ್ಥಿರಾಸ್ತಿ 3.35 ಕೋಟಿಗೆ ಏರಿಕೆಯಾಗಿದೆ.
ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಕಳೆದ ಹತ್ತು ವರ್ಷಗಳಲ್ಲಿ ಮಿಲಿಯನೇರ್ ಆದ ಮತ್ತೊಬ್ಬ ನಾಯಕರಾಗಿದ್ದಾರೆ. ಕಳೆದ ನಾಲ್ಕು ಬಾರಿ ಹರಿದ್ವಾರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿರುವ ಕೌಶಿಕ್ ಅವರು, 2012ರಲ್ಲಿ 20 ಲಕ್ಷದ 23 ಸಾವಿರ ಆಸ್ತಿಯನ್ನು ಘೋಷಿಸಿದ್ದರು. ಅದು 2022 ರಲ್ಲಿ 1.13 ಕೋಟಿ ಆಗಿದ್ದು, ಮದನ್ ಕೌಶಿಕ್ ಅವರು ನಾಮಪತ್ರದಲ್ಲಿ 4 ಕೋಟಿ ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ.
ಕ್ಯಾಬಿನೆಟ್ ಸಚಿವ ಹಾಗೂ ಹರಿದ್ವಾರದ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಯತೀಶ್ವರಾನಂದ್ ಅವರು, 2012ರಲ್ಲಿ ಒಟ್ಟು ಆಸ್ತಿ 10 ಲಕ್ಷ ಎಂದು ಘೋಷಿಸಿದ್ದರು. ಇದು 2017ರಲ್ಲಿ 33 ಲಕ್ಷ ಆಗಿದ್ದು, 2022ರಲ್ಲಿ 71 ಲಕ್ಷಕ್ಕೆ ತಲುಪಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಾಂಗ್ರೆಸ್ ಅಭ್ಯರ್ಥಿ ಮಯೂಖ್ ಮಹಾರ್ ಆಸ್ತಿಯಲ್ಲಿ ಕೊಂಚ ಇಳಿಕೆ ತೋರಿಸಿದ್ದಾರೆ. ಮಹಾರ್ 2017ರಲ್ಲಿ 3.99 ಕೋಟಿ ಮೌಲ್ಯದ ಒಟ್ಟು ಆಸ್ತಿಯನ್ನು ಘೋಷಿಸಿದ್ದರು. ಅದು ಈಗ ₹3.16 ಕೋಟಿಗೆ ಇಳಿದಿದೆ.
ರಾಯ್‌ಪುರ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಮತ್ತು ಶಾಸಕ ಉಮೇಶ್ ಶರ್ಮಾ ಕೌ ಅವರ ಆಸ್ತಿ ಕೂಡ ಹೆಚ್ಚಾಗಿದೆ. 2017ರಲ್ಲಿ ಉಮೇಶ್ ಶರ್ಮಾ ಕೌ ಅವರು 9 ಲಕ್ಷದ 97 ಸಾವಿರದ 527 ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇದು 2021ರ ವೇಳೆಗೆ 16 ಲಕ್ಷದ 29 ಸಾವಿರದ 400ಕ್ಕೆ ತಲುಪಿದೆ. ಸುಮಾರು 62.5 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕೌ ತನ್ನ ಪತ್ನಿಯ ವಾರ್ಷಿಕ ಆದಾಯವನ್ನು 2017ರಲ್ಲಿ 4 ಲಕ್ಷದ 67 ಸಾವಿರದ 754 ಎಂದು ಘೋಷಿಸಿದ್ದರು. ಇದು 2021ರ ವೇಳೆಗೆ 11 ಲಕ್ಷ 76 ಸಾವಿರದ 93 ಆಗಿದೆ.