ಉತ್ತರಕಾಶಿ: ಜಿಲ್ಲೆಯ ಯಮುನೋತ್ರಿ ಧಾಮಕ್ಕೆ ತೆರಳುವ ಮಾರ್ಗದಲ್ಲಿ ರಣಚಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಚಾರ್ ಧಾಮ್ ಯಾತ್ರಾರ್ಥಿಗಳ ಸಂಚಾರ ಸ್ಥಗಿತಗೊಂಡಿದೆ. ಯಮುನೋತ್ರಿ ಧಾಮಕ್ಕೆ ಸುಮಾರು 25 ಕಿಮೀ ಅಂತರದ ಈ ಪ್ರದೇಶದಲ್ಲಿ ಈ ಅನಾಹುತ ಸಂಭವಿಸಿದೆ.
ಈ ಭೂಕುಸಿತದಿಂದಾಗಿ ಯಮುನೋತ್ರಿ ಧಾಮ ಯಾತ್ರಾ ಮಾರ್ಗವನ್ನು ದೊಡ್ಡ ವಾಹನಗಳಿಗೆ ನಿರ್ಬಂಧಿಸಲಾಗಿದೆ ಎಂದು ಯಮುನೋತ್ರಿ ಧಾಮ ಯಾತ್ರಾ ಯಾತ್ರಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಸಣ್ಣ ವಾಹನಗಳ ಮಾರ್ಗಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಎನ್‌ಎಚ್ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಉತ್ತರಕಾಶಿ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇನ್ನು ಜಾಂಕಿಚಟ್ಟಿಯಿಂದ ಬಾರ್ಕೋಟ್‌ಗೆ ಪ್ರಯಾಣಿಸುತ್ತಿದ್ದ 1,200 ಯಾತ್ರಿಕರು ಮತ್ತು ಬಾರ್ಕೋಟ್‌ನಿಂದ ಜಾಂಕಿಚಟ್ಟಿಗೆ ಪ್ರಯಾಣಿಸುತ್ತಿದ್ದ 3,000 ಯಾತ್ರಾರ್ಥಿಗಳು ರಸ್ತೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂದು ಸಂಜೆಯವರೆಗೂ ಹೆದ್ದಾರಿ ತೆರೆಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಆಡಳಿತದ ಮೂಲಗಳು ತಿಳಿಸಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ತಂಡವು ಪ್ರಸ್ತುತ ಹಾನಿಗೊಳಗಾದ ಪ್ರದೇಶವನ್ನು ಸರಿಪಡಿಸುವಲ್ಲಿ ತೊಡಗಿದೆ. 24 ದೊಡ್ಡ ಪ್ರವಾಸಿ ಬಸ್‌ಗಳು ಮತ್ತು 17 ಮಿನಿ ಬಸ್‌ಗಳು ಪ್ರಸ್ತುತ ಈ ಮಾರ್ಗದಲ್ಲಿ ಸಿಲುಕಿಕೊಂಡಿವೆ.