ನವದೆಹಲಿ: ಕೋವಿಡ್‌ನ ಮೂರನೇ ತರಂಗದ ಎಚ್ಚರಿಕೆಗಳ ಮಧ್ಯೆ ತಜ್ಞರು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡುತ್ತಿರುವ ಸಮಯದಲ್ಲಿ, ಉತ್ತರಾಖಂಡದ ಮಂತ್ರಿಯೊಬ್ಬರು ಸಭೆಯೊಂದರಲ್ಲಿ ಕುಳಿತು ಕಾಲ್ಬೆರಳಿಗೆ ಮಾಸ್ಕ್ ನೇತು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ. ಸಚಿವ ಸ್ವಾಮಿ ಯತಿಶ್ವರಾನಂದ್ ಅವರ ಅತಿಯಾದ ನಿರ್ದಯತೆಯ ಪ್ರದರ್ಶನ ಇದು ಎಂದು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.
ಉತ್ತರಾಖಂಡದ ಬಿಜೆಪಿ ಸರ್ಕಾರದ ರಾಜ್ಯ ಸಚಿವರಾದ ಯತಿಶ್ವರಾನಂದ್ ಅವರು ಮಾಸ್ಕ್ ಅನ್ನು ಮುಖಕ್ಕೆ ಹಾಕದೆ ಕಾಲ್ಬೆರಳಲ್ಲಿ ನೇತು ಹಾಕಿಕೊಂಡು ಸಭೆಯಲ್ಲಿ ಹಾಜರಿದ್ದಾರೆ. ಈ ವೇಳೆ ಸಭೆಯಲ್ಲಿ ಬಿಷಾನ್ ಸಿಂಗ್ ಚುಫಲ್ ಮತ್ತು ಸುಬೋಧ್ ಯುನಿಯಾಲ್ ಸೇರಿದಂತೆ ಇನ್ನಿಬ್ಬರು ಮಂತ್ರಿಗಳು ಕೂಡ ಮಾಸ್ಕ್ ಧರಿಸಿರಲಿಲ್ಲ.
ಇದು ಆಡಳಿತ ಪಕ್ಷದ ಮಂತ್ರಿಗಳ ಗಂಭೀರತೆ ಎಂದು ಕಾಲೆಳೆದಿರುವ ಕಾಂಗ್ರೆಸ್ ವಕ್ತಾರ ಗರಿಮಾ ದಾಸೌನಿ, ಮಾಸ್ಕ್ ಧರಿಸದ ಕಾರಣ ಬಡ ಜನರನ್ನು ಶಿಕ್ಷಿಸುತ್ತಾರೆ ಎಂದು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.