ಡೆಹ್ರಾಡೂನ್ (ಉತ್ತರಾಖಂಡ):ಉತ್ತರಾಖಂಡದ ಭಾರತೀಯ ಪೊಲೀಸ್ ಸೇವೆಯ ಇಲಾಖಾ ಬಡ್ತಿ ಸಮಿತಿಯ (ಡಿಪಿಸಿ) ಅನುಮೋದನೆ ಪಡೆದು ಹಲವು ಅಧಿಕಾರಿಗಳು ಬಡ್ತಿ ಪಡೆದಿದ್ದಾರೆ. ಅದರಲ್ಲಿ ಐಪಿಎಸ್ ಅಧಿಕಾರಿ ಅರುಣ್ ಮೋಹನ್ ಜೋಶಿ, ಐಪಿಎಸ್ ಅಧಿಕಾರಿ ಸ್ವೀಟಿ ಅಗರ್ವಾಲ್, ಐಪಿಎಸ್ ಅಧಿಕಾರಿ ಅನಂತ್ ಶಂಕರ್ ಟಕ್ವಾಲೆ ಮತ್ತು ರಾಜೀವ್ ಸ್ವರೂಪ್ ಅವರು ಸೇರಿದ್ದಾರೆ. ಇವರಲ್ಲಿ ಅರುಣ್ ಮೋಹನ್ ಜೋಶಿ ಅವರು ದೇಶದ ಅತ್ಯಂತ ಕಿರಿಯ ಐಜಿ ಎನಿಸಿಕೊಂಡಿದ್ದಾರೆ.
ಉತ್ತರಾಖಂಡದ ಅರುಣ್ ಮೋಹನ್ ಜೋಶಿ 2006ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಐಪಿಎಸ್ ಆದಾಗ ಅವರಿಗೆ ಕೇವಲ 23 ವರ್ಷ. ಆ ಸಮಯದಲ್ಲಿ ಅವರು ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಯಾಗಿದ್ದರು. ಇದರ ನಂತರ, 2004 ರ ಬ್ಯಾಚ್ ಐಪಿಎಸ್ ಅಧಿಕಾರಿ ಗೌರವ್ ರಜಪೂತ್ 2022ರಲ್ಲಿ ಅತ್ಯಂತ ಕಿರಿಯ ಐಜಿ ಆದರು. ಆದರೆ, ಇದೀಗ ಗೌರವ್ ರಜಪೂತ್ ಅವರ ದಾಖಲೆಯನ್ನು ಅರುಣ್ ಮೋಹನ್ ಜೋಶಿ ಮುರಿದಿದ್ದಾರೆ.
ಅರುಣ್ ಮೋಹನ್ ಜೋಶಿ ಅವರು ಕೇವಲ 40 ನೇ ವಯಸ್ಸಿನಲ್ಲಿ ಐಜಿ ಹುದ್ದೆಯನ್ನು ಅಲಂಕರಿಸಿದ ದೇಶದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ವರ್ಕಿಂಗ್ ಸ್ಟೈಲ್ನಿಂದಾಗಿ ಸದಾ ಸುದ್ದಿಯಲ್ಲಿರುವ ಅರುಣ್ ಮೋಹನ್ ಜೋಷಿ ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಐಪಿಎಸ್‌ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಅವರ ಬಗ್ಗೆ ಅರಿತುಕೊಳ್ಳಲು ಹಾಗೂ ಅವರಂತೆ ದೇಶ ಸೇವೆ ಮಾಡಲು ಬಯಸುತ್ತಾರೆ.
ಉತ್ತರಾಖಂಡ್‌ನ ಜಾನ್ಸರ್ ಬವಾರ್ ಬುಡಕಟ್ಟು ಪ್ರದೇಶದ ಚಕ್ರತಾ ಪ್ರದೇಶದ ಮುಂಧೌಲ್ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿದ ಅರುಣ್ ಮೋಹನ್ ಜೋಶಿ ಅವರು 23 ವರ್ಷದಲ್ಲೇ ಐಪಿಎಸ್ ಪಾಸ್ ಮಾಡಿದ್ದರು. ಅರುಣ್ ಮೋಹನ್ ಜೋಶಿ ಐಐಟಿ ರೂರ್ಕಿಯಲ್ಲಿ ಇಂಜಿನಿಯರಿಂಗ್ ಉತ್ತೀರ್ಣರಾಗಿದ್ದಾರೆ. ಅರುಣ್ ಜೋಶಿ ಮಧ್ಯಮ ವರ್ಗದ ಕುಟುಂಬ. ಅವರ ತಂದೆ ಸರ್ಕಾರಿ ನೌಕರಿಯಲ್ಲಿದ್ದರು. ಮೂವರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಹೊಂದಿರುವ ಈ ಕುಟುಂಬದಲ್ಲಿ ಅರುಣ್ ಮೋಹನ್ ಜೋಶಿ ಮಾತ್ರ ಐಪಿಎಸ್ ಆಗಿದ್ದರು.