ಉತ್ತರಾಖಂಡ: ಕಳೆದ ಡಿಸೆಂಬರ್ 30ರಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಅವರು ದೆಹಲಿಯಿಂದ ಮನೆಗೆ ವಾಪಸಾಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದ ಬಳಿಕ, ತಕ್ಷಣ ಪಂತ್ ರಕ್ಷಣೆಗೆ ಧಾವಿಸಿ ಅವರ ಜೀವ ಉಳಿಸಲು ಸಹಾಯ ಮಾಡಿದ ಹರಿಯಾಣ ರಸ್ತೆ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಅನಾಥ ಮತ್ತು ಬಡ ಮಕ್ಕಳಿಗಾಗಿ ನಿರ್ಮಿಸಲಾದ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, 'ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ರಿಕೆಟಿಗನ ಪ್ರಾಣ ಉಳಿಸುವ ಮೂಲಕ ಹರಿಯಾಣದ ರಸ್ತೆ ಸಾರಿಗೆ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ನಿರ್ವಾಹಕ ಪರಮ್‌ಜಿತ್ ಅವರು ಇತರರಿಗೆ ಮಾದರಿಯಾಗಿದ್ದಾರೆ. ಪಂತ್ ಸಂಚರಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಉರುಳುವುದನ್ನು ನೋಡಿದ ಇವರು, ಕೂಡಲೇ ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿ ಕ್ರಿಕೆಟಿಗನನ್ನು ರಕ್ಷಿಸಿದ್ದಾರೆ. ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕನ ಮಾನವೀಯ ಗುಣವನ್ನು ಮೆಚ್ಚಿ ಬರುವ ಜನವರಿ 26 ರಂದು ರಾಜ್ಯ ಸರ್ಕಾರ ಅವರನ್ನು ಗೌರವಿಸಲಿದೆ' ಎಂದು ಹೇಳಿದರು.
ಇದನ್ನೂ ಓದಿ:ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್