ಡೆಹ್ರಾಡೂನ್ (ಉತ್ತರಾಖಂಡ):ದೇಶದಲ್ಲೇ ಮೊದಲ ಬಾರಿಗೆ ಏಕರೂಪ ನಾಗರಿಕ ಸಂಹಿತೆ (Uniform Civil Code - UCC) ಜಾರಿಗೆ ತರಲು ಉತ್ತರಾಖಂಡ ಸರ್ಕಾರ ಅಂತಿಮ ಸಿದ್ಧತೆ ನಡೆಸಿದೆ. ಐವರು ಸದಸ್ಯರ ತಜ್ಞರ ಸಮಿತಿಯು ತನ್ನ ವರದಿಯನ್ನು ಒಂದು ಅಥವಾ ಎರಡು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಈ ಮಸೂದೆಯನ್ನು ಅಂಗೀಕರಿಸಲು ದೀಪಾವಳಿ ನಂತರ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲ ಧರ್ಮಗಳ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ಮಕ್ಕಳ ಪಾಲನೆ ಮತ್ತು ಇತರ ವಿಷಯಗಳಲ್ಲಿ ಏಕರೂಪತೆ ತರುವುದೇ ಏಕರೂಪ ನಾಗರಿಕ ಸಂಹಿತೆಯ ಗುರಿಯಾಗಿದೆ. ಇದು ಮದುವೆ ಅಥವಾ ಇತರ ಯಾವುದೇ ಧಾರ್ಮಿಕ ಸಂಪ್ರದಾಯಗಳಿಗೆ ಮಾನ್ಯತೆ ನೀಡುವುದಿಲ್ಲ. ಕಳೆದ ವರ್ಷ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಯುಸಿಸಿ ಅನುಷ್ಠಾನ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಅದರಂತೆ, ಯುಸಿಸಿ ಕುರಿತು ವರದಿ ಸಿದ್ಧಪಡಿಸಲು 2022ರ ಮೇ 27ರಂದು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.
ಮೂಲಗಳ ಪ್ರಕಾರ, ವಿಚ್ಛೇದನವು ನ್ಯಾಯಾಲಯದ ಮೂಲಕ ಮಾತ್ರ ಮಾನ್ಯವಾಗಿರುತ್ತದೆ. ಲಿಂಗ ಸಮಾನತೆ ಮತ್ತು ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳ ಬಗ್ಗೆ ತಜ್ಞರ ಸಮಿತಿ ಒತ್ತು ನೀಡಿದೆ. ಇದೇ ವೇಳೆ, ಈ ವರದಿಯಲ್ಲಿ ಮಹಿಳೆಯರ ವಿವಾಹ ವಯೋಮಿತಿಯನ್ನು 21ಕ್ಕೆ ಏರಿಸುವಂತೆ ಶಿಫಾರಸು ಮಾಡಿಲ್ಲ. ಮದುವೆ ವಯಸ್ಸು 18ಕ್ಕೆ ಉಳಿಸಿಕೊಳ್ಳುವಂತೆ ತಿಳಿಸಿದೆ. ಆದರೆ, ಲಿವ್ ಇನ್ ರಿಲೇಶನ್ಶಿಪ್ ನೋಂದಣಿ ಕಡ್ಡಾಯಗೊಳಿಸುವಂತೆ ತಜ್ಞರ ಸಮಿತಿಯು ವರದಿಯಲ್ಲಿ ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.