ಡೆಹ್ರಾಡೂನ್(ಉತ್ತರಾಖಂಡ):ಇತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಮತ್ತೆ ಏರಿಕೆಯಾಗುತ್ತಿರುವುದರಿಂದ ರಾಜ್ಯದ ದೇಗುಲಗಳಿಗೆ ಭೇಟಿ ನೀಡುವ ಭಕ್ತರಿಗೆ ಇಲ್ಲಿನ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡುವ ಭಕ್ತಾದಿಗಳು ದರ್ಶನಕ್ಕೆ ನೋಂದಣಿ ಮಾಡಿಸುವುದು, ಇ ಪಾಸ್ ಕಡ್ಡಾಯವಾಗಿರುತ್ತದೆ. ಭಕ್ತರು ಎರಡು ಹಂತದ ಕೋವಿಡ್ ವ್ಯಾಕ್ಸಿನೇಷನ್ ಆಗಿದ್ದರೂ, ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಬೇಕಿದೆ.
ಭಕ್ತರು ನದಿಗಳಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಪ್ರಯಾಣಿಕರಿಗೆ ಸೋಂಕಿನ ಲಕ್ಷಣಗಳಿದ್ದರೆ ಅಥವಾ ಕೊರೊನಾ ದೃಢಪಟ್ಟರೆ ಅವರನ್ನು ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲಾಗುತ್ತದೆ. ನಿತ್ಯ ಬದರಿನಾಥ ದೇವಸ್ಥಾನದಲ್ಲಿ 1 ಸಾವಿರ, ಕೇದಾರನಾಥ ದೇಗುಲದಲ್ಲಿ 800, ಗಂಗೋತ್ರಿ ಧಾಮದಲ್ಲಿ 600, ಯಮುನೋತ್ರಿ ಧಾಮಕ್ಕೆ 400 ಜನರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಮಾರ್ಗಸೂಚಿಯಲ್ಲಿ ಏನೇನಿದೆ?
- ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಲು ಬರುವ ಪ್ರಯಾಣಿಕರು ಮುಂಚಿತವಾಗಿಯೇ ನೋಂದಾಯಿಸಿಕೊಂಡಿರಬೇಕು.
- ನೋಂದಣಿ ನಂತರ ಇ-ಪಾಸ್‌ಗಳನ್ನು ನೀಡಲಾಗುತ್ತದೆ. ಅದರ ನಂತರವೇ ಚಾರ್ಧಂನಲ್ಲಿ ದರ್ಶನಕ್ಕೆ ಅನುಮತಿ ನೀಡಲಾಗುವುದು.
- ದೇವಾಲಯದ ಆವರಣದಲ್ಲಿ ಪ್ರಸಾದ ನೀಡುವುದು, ತಿಲಕ ಹಚ್ಚುವುದನ್ನು ನಿಷೇಧಿಸಲಾಗಿದೆ.
- ದೇವಸ್ಥಾನದಲ್ಲಿರುವ ವಿಗ್ರಹಗಳು ಮತ್ತು ಗಂಟೆಗಳನ್ನು ಮುಟ್ಟುವುದು, ಕೊಳಗಳಲ್ಲಿ ಸ್ನಾನ ಮಾಡುವುದಕ್ಕೆ ನಿಷೇಧ.
- ಕೇದಾರನಾಥ ಧಾಮದಲ್ಲಿ, ಕೇವಲ ಆರು ಭಕ್ತರು ಒಂದು ಬಾರಿಗೆ ಸಭಾಂಗಣದಿಂದ ದರ್ಶನ ಪಡೆಯಬಹುದು.
- ಗರ್ಭಗುಡಿಗೆ ಭಕ್ತರು ಪ್ರವೇಶವಿಲ್ಲ.
- ದಿನಕ್ಕೆ ಮೂರು ಬಾರಿ ದೇಗುಲದ ಆವರಣವನ್ನು ಸ್ವಚ್ಛಗೊಳಿಸಬೇಕು.
- ಕಡ್ಡಾಯವಾಗಿ ಎಲ್ಲಾ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಬೇಕು.
- ಪ್ರತಿ ದೇಗುಲಗಳಲ್ಲಿ ಆರೋಗ್ಯ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು.
ಚಾರ್ಧಾಮ್ ಯಾತ್ರೆಗೆ ಉತ್ತರಾಖಂಡ ಸರ್ಕಾರ ಹೇರಿದ್ದ ನಿಷೇಧವನ್ನು ಉತ್ತರಾಖಂಡ ಹೈಕೋರ್ಟ್ ತೆರವುಗೊಳಿಸಿದೆ. ರಾಜ್ಯದಲ್ಲಿ ಯಾತ್ರೆಯನ್ನು ಪುನಾರಂಭಿಸಲು ಅನುಮತಿ ನೀಡಿರುವ ಕೋರ್ಟ್, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಗುಜರಾತ್ಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ: ಬಿಜೆಪಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ