ಡೆಹ್ರಾಡ್ಯೂನ್(ಉತ್ತರಾಖಂಡ): ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟೋಕಿಯೊ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರಿಗೆ 25 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಉತ್ತರಾಖಂಡದ ಮಗಳು ಮತ್ತು ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಆಕೆಯ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ 25 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಮತ್ತು ಆಕರ್ಷಕ ಕ್ರೀಡಾ ನೀತಿಯನ್ನು ಜಾರಿಗೆ ತರಲಾಗುವುದು. ಈ ಮೂಲಕ ನಮ್ಮಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ಪ್ರೋತ್ಸಾಹ ಒದಗಿಸಲಾಗುತ್ತದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಶುಕ್ರವಾರ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಭಿನಂದನಾರ್ಹ ಆಟವನ್ನು ಆಡಿದ ಮಹಿಳಾ ತಂಡಕ್ಕೆ ಶುಭಾಶಯ ತಿಳಿಸಿ, ಹರಿಯಾಣದಿಂದ ಹಾಕಿ ತಂಡಕ್ಕೆ ಆಯ್ಕೆಯಾದ 9 ಮಂದಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಇತಿಹಾಸ ಬರೆದಿದ್ದು, ಇಡೀ ದೇಶವೇ ಸಾಧಕರನ್ನು ಕೊಂಡಾಡಿದೆ. ಪಂಜಾಬ್ ಹಾಗೂ ಮಧ್ಯಪ್ರದೇಶದ ಹಾಕಿ ಆಟಗಾರರಿಗೆ ಅಲ್ಲಿನ ಸರ್ಕಾರಗಳು ಸಿಹಿ ಸುದ್ದಿ ನೀಡಿ, 1 ಕೋಟಿ ರೂ. ನಗದು ಬಹುಮಾನ ಘೋಷಿಸಿವೆ.