ಡೆಹ್ರಾಡೂನ್:ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ನೀರ್ಗಲ್ಲು ಕುಸಿತದ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಆರನೇ ದಿನಕ್ಕೆ ಕಾಲಿಟ್ಟಿದೆ. ಒಳಗೆ ಸಿಲುಕಿರುವ ಓರ್ವ ಕಾರ್ಮಿಕ ತನ್ನ ಮನೆಯ ಸದಸ್ಯರ ಫೋನ್ ಕರೆ ಸ್ವೀಕರಿಸಿದ್ದಾನೆ ಎಂಬ ಅಚ್ಚರಿ ಸಂಗತಿ ತಿಳಿದುಬಂದಿದೆ.
ಈ ಮಾಹಿತಿ ಹೊರಬರುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಪಡೆಗಳು ತಮ್ಮ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಬೇಕಿದೆ. ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರು ಇನ್ನೂ ಜೀವಂತವಾಗಿ ಇರುಬಹುದು.
5 ದಿನಗಳಿಂದ ಸುರಂಗದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ತನ್ನ ತಂಗಿಯ ಪೋನ್ ಕರೆ ಸ್ವೀಕರಿಸಿ ಹಲೋ ಎಂದು ಪ್ರತಿಕ್ರಿಯಿಸಿದ್ದಾನೆ. ತೆಹ್ರಿ ಗರ್ವಾಲ್ ನಿವಾಸಿ ಜಿತೇಂದ್ರ ಧನೈ ಅವರು 2017ರಿಂದ ತಪೋವನದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ. ದುರಂತದ ನಂತರ ಆತ ಸುರಂಗದೊಳಗೆ ಸಿಕ್ಕಿಬಿದ್ದಿದ್ದಾನೆ. ಅಂದಿನಿಂದ ಕುಟುಂಬ ಸದಸ್ಯರು ಆತನ ಜತೆ ನಿರಂತರವಾಗಿ ಫೋನ್ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದರು.
ಸತತ ಐದು ದಿನಗಳಿಂದ ಸಹೋದರಿ ತನ್ನ ಅಣ್ಣನ ನಂಬರ್ಗೆ ಕಾಲ್ ಮಾಡುತ್ತಿದ್ದಾಳೆ. 'ಐದು ದಿನಗಳಿಂದ ಅಣ್ಣನ ಫೋನ್ ರಿಂಗ್ ಆಗುತ್ತಿದೆ. ಆದರೆ ರಿಸೀವ್ ಮಾಡಿರಲಿಲ್ಲ. ನಿನ್ನೆ ಇದ್ದಕ್ಕಿಂದ್ದಂತೆ ಫೋನ್ ಎತ್ತಿದ ಅಣ್ಣ ಹಲೋ ಅಂತ ಹೇಳಿದ. ಈ ನಂತರ ಫೋನ್ ಕಟ್ ಆಯಿತು' ಎಂದು 'ಈಟಿವಿ ಭಾರತ'ಗೆ ಜೀತೇಂದ್ರ ಧನೈ ಅವರ ಸಹೋದರಿ ಸೀಮಾ ತಿಳಿಸಿದ್ದಾರೆ.