ಜೋಶಿಮಠ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ನಡೆದ ಸ್ಥಳದಿಂದ 2 ಮೃತದೇಹಗಳನ್ನು ಮೇಲೆತ್ತಲಾಗಿದ್ದು, 291 ಜನರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಎರಡು ಮೃತದೇಹಗಳನ್ನು ಈಗಾಗಲೇ ಮೇಲೆತ್ತಲಾಗಿದೆ. ಭೂಕುಸಿತದಿಂದಾಗಿ 4 ರಿಂದ 5 ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರ ಸಂಜೆಯಿಂದ ಭಪುಂಡ್ನಿಂದ ಸುಮ್ನಾಕ್ಕೆ ಹೋಗುವ ಮಾರ್ಗದಲ್ಲಿನ ಹಿಮ ತೆರವುಗೊಳಿಸಲು ಜೋಶಿ ಮಠದ ಬಿಆರ್‌ಟಿಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಇನ್ನೂ 6-8 ಗಂಟೆಗಳು ಬೇಕಾಗಬಹುದು ಎಂದು ಸೇನೆ ತಿಳಿಸಿದೆ.
ಭಾರೀ ಹಿಮಪಾತವು ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಬಿಆರ್‌ಒ ತಂಡಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಹಿಮಪಾತದ ನಡುವೆ ರಕ್ಷಣಾ ತಂಡದ ಕೆಲವು ಅಧಿಕಾರಿಗಳೂ ಸಿಲುಕಿಕೊಂಡಿದ್ದಾರೆ.
ಸುಮ್ನಾ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿ ಘಟನೆ ಸಂಭವಿಸಿದ್ದು, ಇಲ್ಲಿಯೇ ಬಾರ್ಡರ್ ರೋಡ್ ಆರ್ಗನೈಝೇಷನ್ನ ಎರಡು ಕಾರ್ಮಿಕ ಕ್ಯಾಂಪ್ಗಳಿವೆ. ಈ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದೆ ಎಂದು ಸೇನೆ ಹೇಳಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಭಾರತ - ಚೀನಾ ಗಡಿಯ ಸಮೀಪವಿರುವ ಸುಮ್ನಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಿಮಸ್ಫೋಟ ಸಂಭವಿಸಿದೆ. ರಿಷಿ ಗಂಗಾ ನದಿಯ ನೀರಿನ ಮಟ್ಟ ಎರಡು ಅಡಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಿಳಿಸಿದೆ.