ಡೆಹ್ರಾಡೂನ್ (ಉತ್ತರಾಖಂಡ): ಕಳೆದೆರಡು ದಿನದಿಂದ ಎಡಬಿಡೆದೆ ಸುರಿಯುತ್ತಿರುವ ಧಾರಾಕಾರ ಮಳೆಯು ಉತ್ತರಾಖಂಡದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಜನರ ರಕ್ಷಣೆಗಾಗಿ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ರಾಜ್ಯಾದ್ಯಂತ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.
ದೇವಭೂಮಿಯಲ್ಲಿ ವರುಣನ ಉಗ್ರರೂಪ ಹಲವೆಡೆ ನಾನಾ ಅವಘಡಗಳನ್ನು ವರುಣ ಸೃಷ್ಟಿಸಿದ್ದು, ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮೂವರು, ಚಂಪಾವತ್ ಜಿಲ್ಲೆಯಲ್ಲಿ ಒಬ್ಬರು ಸೇರಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.
ನೈನಿತಾಲ್ ಸರೋವರವು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಮುತ್ತಿಲಿನ ಪ್ರದೇಶಗಳೆಲ್ಲಾ ಜಲಾವೃತವಾಗಿದೆ. ನೈನಿತಾಲ್ ಜಿಲ್ಲೆಯ ರಾಮಗಢ ಗ್ರಾಮದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಜಿಲ್ಲೆಯ ಹಲ್ದ್ವಾನಿ ಪ್ರದೇಶದಲ್ಲಿರುವ ಗೌಲಾ ನದಿಯ ಸೇತುವೆ ಕುಸಿಯುತ್ತಿದ್ದು, ಸೇತುವೆಯನ್ನು ದಾಟಿ ಬರದಂತೆ ಪ್ರಯಾಣಿಕರನ್ನು ವಾಪಸ್ ಹೋಗುವಂತೆ ಸ್ಥಳೀಯರು ಕೂಗಿ ಕೂಗಿ ಎಚ್ಚರಿಕೆ ನೀಡುತ್ತಿದ್ದಾರೆ.
ರಿಷಿಕೇಶದಲ್ಲಿ ಚಂದ್ರಭಾಗ ಸೇತುವೆ, ತಪೋವನ, ಲಕ್ಷ್ಮಣ ಜೂಲ ಮತ್ತು ಮುನಿ ಕಿ ರೇತಿ ಭದ್ರಕಾಳಿ ಮಾರ್ಗದಲ್ಲಿ ವಾಹನಗಳು ಬರದಂತೆ ನಿರ್ಬಂಧ ಹೇರಲಾಗಿದೆ. ರಿಷಿಕೇಶದಲ್ಲಿ ದ್ವೀಪ ಪ್ರದೇಶದಲ್ಲಿ ಸಿಲುಕಿದ್ದ 22 ಜನರನ್ನು ಎಸ್ಡಿಆರ್ಎಫ್ ತಂಡ ರಕ್ಷಿಸಿದೆ.
ಚಂಪಾವತ್ ಜಿಲ್ಲೆಯಲ್ಲಿರುವ ಚಾಲ್ತಿ ನದಿ ತುಂಬಿ ಹರಿಯುತ್ತಿದ್ದು, ನದಿಯ ಮೇಲೆ ನಿರ್ಮಾಣ ಹಂತದಲ್ಲಿರುವ ಸೇತುವೆ ಕೊಚ್ಚಿಹೋಗಿದೆ. ಮನೆಗಳು ನೀರಿನಲ್ಲಿ ಮುಳುಗುತ್ತಿದ್ದು, ಜನರು ಮೇಲ್ಛಾವಣಿ ಏರಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಚಮೋಲಿ ಜಿಲ್ಲೆಯಲ್ಲಿ ಬದರಿನಾಥ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ
ಚಂಪಾವತ್, ಹರಿದ್ವಾರ, ರಿಷಿಕೇಶ, ಶ್ರೀನಗರ, ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ, ಗುಪ್ತಕಾಶಿ, ಉಖಿಮಠ, ಕರ್ಣಪ್ರಯಾಗ, ಜೋಶಿಮಠ ಮತ್ತು ಪಾಂಡುಕೇಶ್ವರ ಸೇರಿದಂತೆ ಹಲವಡೆ ರಕ್ಷಣಾ ತಂಡಗಳು ಜನರನ್ನು, ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.