ನವದೆಹಲಿ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ ಎಲ್ಲಾ 41 ಕಾರ್ಮಿಕರಿಗೆ ತಲಾ 1 ಲಕ್ಷ ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಕಾರ್ಮಿಕರು ಸುರಕ್ಷಿತವಾಗಿ ಅವರ ಮನೆಗೆ ತಲುಪುವವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.
ಸಿಲ್ಕ್ಯಾರಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಕರ್ ಸಿಂಗ್ ಧಾಮಿ, ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರಿಗೆ ಸರ್ಕಾರದಿಂದ ತಲಾ ಒಂದು ಲಕ್ಷ ರೂ.ಗಳ ಚೆಕ್ ನೀಡಲಾಗುವುದು. ಸದ್ಯಕ್ಕೆ ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕುಟುಂಬ ಸದಸ್ಯರು ಮತ್ತು ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ರಕ್ಷಣಾ ಕಾರ್ಯಚರಣೆಗೆ ಎಲ್ಲೆಡೆ ಶ್ಲಾಘನೆ: ಯಶಸ್ವಿ ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಹಾಗು ವಿಪಕ್ಷ ನಾಯಕರು ಸೇರಿದಂತೆ ಗಣ್ಯರು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ದ್ರೌಪದಿ ಮುರ್ಮು, 'ಉತ್ತರಾಖಂಡದಲ್ಲಿ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆ ಯಶಸ್ವಿಯಾಯಿತೆಂಬ ಸುದ್ದಿ ತಿಳಿದು ಹರ್ಷವಾಯಿತು. ಕಳೆದ 17 ದಿನಗಳಿಂದ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಉಂಟಾದ ಅಡೆತಡೆಗಳು, ಸವಾಲುಗಳನ್ನು ಎದುರಿಸಿ ರಕ್ಷಿಸಲಾಗಿದೆ. ಕಷ್ಟಕರ ಮೂಲಸೌಕರ್ಯ ಹಾಗೂ ವೈಯಕ್ತಿಕ ಅಪಾಯವನ್ನು ಮೀರಿ ಕಾರ್ಮಿಕರನ್ನು ಹೊರತರುವಲ್ಲಿ ನಡೆಸಿದ ಸಾಹಸಕ್ಕೆ ಇಡೀ ದೇಶವೇ ವಂದಿಸುತ್ತದೆ. ಈ ಐತಿಹಾಸಿಕ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ನುರಿತ ತಜ್ಞರು, ಕಾರ್ಮಿಕರಿಗೆ ಅಭಿನಂದನೆಗಳು' ಎಂದಿದ್ದಾರೆ.
ಪ್ರಧಾನಿ ಮೋದಿ ಪೋಸ್ಟ್ ಮಾಡಿ, 'ನಮ್ಮ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ. ಸುರಂಗದಲ್ಲಿ ಸಿಲುಕಿದ ಸಹೋದ್ಯೋಗಿಗಳ ಧೈರ್ಯ, ತಾಳ್ಮೆ ಎಲ್ಲರಿಗೂ ಸ್ಫೂರ್ತಿ. ಇವರೆಲ್ಲರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈ ಮಿಷನ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಮಾನವೀಯತೆ ಅಧಾರದ ಮೇಲೆ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ನಮ್ಮ ಈ ಸ್ನೇಹಿತರು ಸುದೀರ್ಘ ಕಾಯುವಿಕೆಯ ನಂತರ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಿರುವುದು ಅತ್ಯಂತ ತೃಪ್ತಿಯ ವಿಷಯ. ಅವರ ಕುಟುಂಬ ಸದಸ್ಯರನ್ನು ಎಷ್ಟು ಹೊಗಳಿದರೂ ಸಾಲದು' ಎಂದು ತಿಳಿಸಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿ, 'ನವೆಂಬರ್ 12ರಿಂದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಮಂಗಳವಾರ ಸಂಜೆ ಹೊರತೆಗೆಯಲಾಯಿತು. ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ನನಗೆ ಸಮಾಧಾನ ಮತ್ತು ಸಂತೋಷವಾಯಿತು. ಇದು ಬಹು ಏಜೆನ್ಸಿಗಳು ನಡೆಸಿದ ಸಂಘಟಿತ ಕಾರ್ಯಾಚರಣೆ. ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅತ್ಯಂತ ಮಹತ್ವದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದೂ ಒಂದು. ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಪರಸ್ಪರ ಸಂಪೂರ್ಣವಾಗಿ ಬೆಂಬಲ ನೀಡಿದ್ದು, ಎಲ್ಲರ ಅವಿರತ ಪ್ರಯತ್ನ ಮತ್ತು ಪ್ರಾರ್ಥನೆಯಿಂದ ಈ ಅಭಿಯಾನ ಸಾಧ್ಯವಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ, ಸಂಪೂರ್ಣ ಅಭಿಯಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾ ಅಗತ್ಯವಿರುವಾಗ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ' ಎಂದು ತಿಳಿಸಿದ್ದಾರೆ.
ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಮಿಕರನ್ನು ಉಳಿಸಲು ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ. 'ಉತ್ತರಕಾಶಿಯಲ್ಲಿ ಸುರಂಗದಲ್ಲಿ ಸಿಲುಕಿರುವ ನಮ್ಮೆಲ್ಲಾ ಕಾರ್ಮಿಕ ಸಹೋದರರನ್ನು ರಕ್ಷಿಸಲಾಗಿದೆ, ಇದು ಇಡೀ ದೇಶಕ್ಕೆ ಒಳ್ಳೆಯ ಸುದ್ದಿ. ಸುದೀರ್ಘ ದಿನಗಳ ಕಾಲ ಸುರಂಗದಲ್ಲಿ ಸವಾಲಿನ ಪರಿಸ್ಥಿತಿಗಳನ್ನು ಎದುರಿಸಿದ ಕೆಲಸಗಾರರ ಧೈರ್ಯವನ್ನು ರಾಷ್ಟ್ರವು ವಂದಿಸುತ್ತದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕತ್ತಲೆಯಿಂದ ಬೆಳಕಿನೆಡೆಗೆ: 41 ಕಾರ್ಮಿಕರ ಕುಟುಂಬ ನಿರಾಳ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅಭಿನಂದಿಸಿದ್ದಾರೆ. 'ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸುರಂಗ ಅಪಘಾತದಲ್ಲಿ ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರ ಸುರಕ್ಷಿತ ನಿರ್ಗಮನದ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಗಿದೆ. ಇಡೀ ದೇಶವೇ ಈ ಅಭಿಯಾನದ ಮೇಲೆ ಕಣ್ಣಿಟ್ಟಿತ್ತು. ಇದೀಗ ದೇಶವೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಎಲ್ಲಾ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಇದೊಂದು ಸಂತಸದ ಕ್ಷಣ. ಬಹಳ ಕಷ್ಟಕರ ಮತ್ತು ಸವಾಲಿನ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಈ ಎಲ್ಲಾ ಕಾರ್ಮಿಕರನ್ನು ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಉತ್ತರಾಖಂಡ ಪೊಲೀಸ್ ಮತ್ತು ಭಾರತೀಯ ಸೇನೆ ಸೇರಿದಂತೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ಎಲ್ಲಾ ಏಜೆನ್ಸಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ' ಎಂದು ಹೇಳಿದ್ದಾರೆ.