ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ ಬೊಲೆರೋ: ದೇಗುಲಕ್ಕೆ ತೆರಳುತ್ತಿದ್ದ 9 ಜನರ ದುರ್ಮರಣ

ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಬೊಲೆರೋ ಕಾರೊಂದು ಕಂದಕಕ್ಕೆ ಬಿದ್ದ ಭಾರಿ ದುರಂತ ಸಂಭವಿಸಿದೆ.

Uttarakhand: 9 killed, 2 injured after car falls into ditch in Pithoragarh
ಉತ್ತರಾಖಂಡದಲ್ಲಿ 600 ಮೀಟರ್ ಆಳದ ಕಂದಕಕ್ಕೆ ಬಿದ್ದ ಬೊಲೆರೋ: 9 ಜನರ ದುರ್ಮರಣ

By

Published : Jun 22, 2023, 3:21 PM IST

ಪಿಥೋರಗಢ (ಉತ್ತರಾಖಂಡ):ಬೊಲೆರೋ ಕಾರೊಂದು ಅಂದಾಜು 600 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಒಂಬತ್ತು ಮಂದಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಇಂದು ನಡೆದಿದೆ. ಮೃತರೆಲ್ಲರೂ ಕೋಕಿಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

"ಬಾಗೇಶ್ವರ ಜಿಲ್ಲೆಯ ಸಾಮಾ ಗ್ರಾಮದ ಒಟ್ಟು 11 ಜನರು ಕಾರಿನಲ್ಲಿ ಮುನ್ಸಿಯಾರಿ ಬ್ಲಾಕ್‌ನ ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಹೊಕ್ರಾ ಸಮೀಪ ಕಾರು ಕಂದಕಕ್ಕೆ ಬಿದ್ದಿದೆ. ಇದರಿಂದ 11 ಪೈಕಿ 9 ಮಂದಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆ" ಎಂದು ಇನ್ಸ್‌ಪೆಕ್ಟರ್ ಜನರಲ್ (ಐಜಿ) ಕುಮಾವ್ನ್ ನಿಲೇಶ್ ಆನಂದ್ ಭರ್ನೆ ಹೇಳಿದರು.

ದುರ್ಗಮ ಕಂದಕಕ್ಕೆ ಕಾರು ಉರುಳುತ್ತಿದ್ದಾಗ ಕಾರಿನಲ್ಲಿದ್ದವರು ಜೀವಭಯದಿಂದ ಕಿರುಚಾಡಿದ್ದಾರೆ. ಇದನ್ನು ಕೇಳಿದ ಸಮೀಪದ ಗ್ರಾಮಗಳ ಜನರು ತಮ್ಮ ಕೆಲಸ ಬಿಟ್ಟು ಘಟನಾ ಸ್ಥಳದೆಡೆಗೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಕಾರು ಕಂದಕಕ್ಕೆ ಬಿದ್ದಿತ್ತು. ಮೃತದೇಹಗಳು ಕಂದಕದ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ತಕ್ಷಣವೇ ಅಪಘಾತದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ರಸ್ತೆ ಮಧ್ಯೆ ಇಳಿಜಾರಿನ ಕಾರಣ ಚಾಲಕನಿಗೆ ಕಾರು ನಿಭಾಯಿಸಲು ಸಾಧ್ಯವಾಗದೆ ಕಮರಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಧಾವಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡರು. ಆದರೆ, ಕಂದಕವು ದುರ್ಗಮವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗಿದೆ. ಆ್ಯಂಬುಲೆನ್ಸ್‌ ಮೂಲಕ ಗಾಯಾಳುಗಳನ್ನು ಮಾತ್ರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಉತ್ತರಾಖಂಡ ಸಿಎಂ ಸಂತಾಪ: ಮತ್ತೊಂದೆಡೆ, ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ಬಾಗೇಶ್ವರದ ಸಾಮಾದಿಂದ ಪಿಥೋರಗಢದ ಕಡೆಗೆ ಬರುತ್ತಿದ್ದ ವಾಹನ ಅಪಘಾತದಲ್ಲಿ ಪ್ರಯಾಣಿಕರು ಸಾವನ್ನಪ್ಪಿದ ಸುದ್ದಿ ತಿಳಿದು ಅಘಾತವಾಯಿತು. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಗಲಿದ ಆತ್ಮಗಳಿಗೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಧಾಮಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:Boat tragedy: ಬೋಟ್​ ಮುಳುಗಿ ಒಂದೇ ಕುಟುಂಬದ ಇಬ್ಬರು ಸಾವು.. ದೋಣಿ ಮುಳುಗಲು ಕಾರಣವಾಯ್ತು ಒಂದು ಸಣ್ಣ ರಂಧ್ರ

ABOUT THE AUTHOR

...view details