ಉತ್ತರಕಾಶಿ (ಉತ್ತರಾಖಂಡ) :ಕುಸಿದ ಸಿಲ್ಕ್ಯಾರ ಸೇತುವೆ ದುರಸ್ಥಿಗೆ ತೆರಳಿ, ಅದರಲ್ಲೇ ಕಳೆದ 14 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತೆ ಅಡ್ಡಿಯುಂಟಾಗಿದೆ. 46 ಮೀಟರ್ ಉದ್ದ ಕೊರೆದು, ಇನ್ನೇನು 15 ಮೀಟರ್ನಷ್ಟು ದೂರ ಇರುವ ಕಾರ್ಮಿಕರನ್ನು ತಲುಪುವ ಮೊದಲು ಅಮೆರಿಕದ ಅಗರ್ ಎಂಬ ಕೊರೆಯುವ ಯಂತ್ರ ಕೆಟ್ಟು ನಿಂತಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಸುರಂಗ ತಜ್ಞ, ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಿರುವ ಅರ್ನಾಲ್ಡ್ ಡಿಕ್ಸ್, ಅವಶೇಷಗಳನ್ನು ಕೊರೆಯುವ ಅಗರ್ ಯಂತ್ರ ಕೈಕೊಟ್ಟಿದೆ. ಬದಲಿ ಆಯ್ಕೆಯನ್ನು ಬಳಸಲಾಗುತ್ತಿದೆ. ಒಳಗಿರುವ ಕಾರ್ಮಿಕರನ್ನು ಹೊರ ತರುವುದು ಪಕ್ಕಾ. ಆದರೆ, ಯಾವಾಗ ಬರುತ್ತಾರೆ ಎಂಬ ಬಗ್ಗೆ ನಿಖರವಾಗಿ ಹೇಳಲಾರೆ. ಸಾಧ್ಯವಾದರೆ, ಇಂದು ಅಥವಾ ನಾಳೆ ಅವರು ಸುರಕ್ಷಿತವಾಗಿ ಹೊರಬರುವರು. ಕ್ರಿಸ್ಮಸ್ ಹಬ್ಬವನ್ನು ಅವರವರ ಮನೆಯಲ್ಲಿ ಆಚರಣೆ ಮಾಡುವುದು ಮಾತ್ರ ಖಂಡಿತ ಎಂದು ಅವರು ಭರವಸೆ ನೀಡಿದರು.
ನಿರೀಕ್ಷಿಸದ ಸಮಸ್ಯೆಗಳು ಎದುರು:ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ವಿಶಾಲ್ ಚೌಹಾಣ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಈಗಾಗಲೇ 47 ಮೀಟರ್ನಷ್ಟು ಉದ್ದ ಕೊರೆಯಲಾಗಿದೆ. 12 ರಿಂದ 15 ಮೀಟರ್ ಬಾಕಿ ಉಳಿದಿದೆ. ಯಂತ್ರಗಳು ಸತತವಾಗಿ ಬಳಸಿದ್ದರಿಂದ ಅವುಗಳು ದುರಸ್ತಿಗೀಡಾಗಿವೆ. ಮತ್ತೊಂದು ತಂತ್ರ ಬಳಸಲಾಗುತ್ತಿದೆ. ನಿರೀಕ್ಷಿಸದ ಸಮಸ್ಯೆಗಳು ಎದುರಾಗುತ್ತಿವೆ. ಏನೇ ಆದರೂ ಕಾರ್ಮಿಕರನ್ನು ಹೊರತರುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.