ಉನ್ನಾವೋ(ಉತ್ತರ ಪ್ರದೇಶ) : ಒಂದು ಕಾಲದಲ್ಲಿ ಪೊಲೀಸರೆಂದರೇ ಮಕ್ಕಳು ಭಯದ ಜೊತೆಗೆ ಚಳಿಜ್ವರ ಬಂದವರಂತೆ ಆಡುತ್ತಿದ್ದರು. ಆದರೆ ಈಗ ಜನಸ್ನೇಹಿ ಪೊಲೀಸರು ವಿದ್ಯಾರ್ಥಿಗಳು ಹಾಗೂ ಜನರಿಗೆ ತುಂಬಾನೆ ಹತ್ತಿರವಾಗುತ್ತಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಇಲ್ಲೋರ್ವ ಪ್ರೀತಿಯ ಪೊಲೀಸಪ್ಪ ಮಕ್ಕಳ ಕಣ್ಣಲ್ಲಿ ಭಾವನಾತ್ಮಕತೆಯ ಕಣ್ಣೀರು ತರಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಸುತ್ತಲೂ ವಿದ್ಯಾರ್ಥಿಗಳು ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಇರುವಂತೆ ವರ್ಗಾವಣೆಗೊಂಡ ಪೊಲೀಸ್ ಟೀಚರ್ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆ ವೇಳೆ ಅವರನ್ನು ಬಿಟ್ಟುಕೊಡದ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಪೊಲೀಸ್ ಅಧಿಕಾರಿಗೆ ಇದೆ. ಹೀಗಾಗಿ ಅವರನ್ನು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೇ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಎಲ್ಲರನ್ನು ಒಂದು ಕ್ಷಣ ದುಃಖಿತರನ್ನಾಗಿಸುತ್ತದೆ.
ಹೆಚ್ಚಿನ ವಿವರ: ಸಚಿನ್ ಕೌಶಿಕ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ರೋಹಿತ್ ಕುಮಾರ್ ಯಾದವ್ ಅವರು ಉನ್ನಾವೋದ ಸರ್ಕಾರಿ ರೈಲ್ವೆ ಪೊಲೀಸ್ (GRP) ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದು, ಸೆಪ್ಟೆಂಬರ್ 2018 ರಿಂದ ಸಿಕಂದರಪುರ ಕರ್ನ್ ಬ್ಲಾಕ್‌ನ ಸುಮಾರು 125 ಮಕ್ಕಳಿಗೆ ತಮ್ಮ ಕರ್ತವ್ಯ ಮುಗಿಸಿಕೊಂಡು ಬಂದು ಪಾಠ ಮಾಡುತ್ತಿದ್ದರು. ಇತ್ತೀಚೆಗೆ, ಅವರನ್ನು ಝಾನ್ಸಿಯ ಸಿವಿಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ರೋಹಿತ್ ಅವರು 2005 ರಲ್ಲಿ ಉತ್ತರ ಪ್ರದೇಶ ಪೊಲೀಸ್ ಪಡೆಗೆ ಸೇರಿದ್ದರು.