ಪ್ರಯಾಗರಾಜ್ (ಉತ್ತರ ಪ್ರದೇಶ):ಗ್ಯಾಂಗಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಗುಂಡಿಟ್ಟು ಕೊಂದ ಹಂತಕರ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಆರೋಪಪಟ್ಟಿ ಸಲ್ಲಿಸಿದೆ. ಜೈಲಿನಲ್ಲಿರುವ ಶೂಟರ್‌ಗಳಾದ ಅರುಣ್ ಮೌರ್ಯ, ಲವಲೇಶ್ ತಿವಾರಿ ಮತ್ತು ಸನ್ನಿ ಸಿಂಗ್ ವಿರುದ್ಧ 1200 ಪುಟಗಳ ಚಾರ್ಜ್‌ಹೀಟ್ ಅನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಹಿಂದೆ ಈ ಶೂಟೌಟ್ ಘಟನೆಗೆ ಲವಲೇಶ್ ತಿವಾರಿ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿತ್ತು. ಆದರೆ, ಸಲ್ಲಿಕೆಯಾದ ಚಾರ್ಜ್ ಶೀಟ್ನಲ್ಲಿ ಸನ್ನಿ ಸಿಂಗ್ ಈ ಘಟನೆಯ ಮಾಸ್ಟರ್ ಮೈಂಡ್ ಎಂದು ಉಲ್ಲೇಖ ಮಾಡಲಾಗಿದೆ. ಅವರ ಅಪರಾಧದ ಹಿನ್ನೆಯನ್ನು ಸಹ ಈ ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಪ್ರಯಾಗ್‌ರಾಜ್‌ನ ಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ, ಆರೋಪಪಟ್ಟಿಯಲ್ಲಿ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ದು, ಈ ಮೂವರು ಶೂಟರ್‌ಗಳ ಹೊರತು ನಾಲ್ಕನೆ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಬಹುಶಃ ಇದರಿಂದಲೇ ತನಿಖೆ ಇನ್ನೂ ಮುಗಿದಿಲ್ಲ. ಇನ್ನೂ ಕೆಲವು ಸಾಕ್ಷ್ಯಗಳು ಸಿಕ್ಕರೆ ಪೂರಕ ಚಾರ್ಜ್ ಶೀಟ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಆರೋಪ ಪಟ್ಟಿಯ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ನ್ಯಾಯಾಂಗ ಬಂಧನ ಶುಕ್ರವಾರ (ಜು.14) ಅಂತ್ಯಗೊಳ್ಳಲಿದೆ. ಗುರುವಾರ ಸಂಜೆ ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ನೋಡಿದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ಗೌತಮ್ ಅವರು ಮೂವರು ಆರೋಪಿಗಳನ್ನು ಜುಲೈ 14 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸರಿಗೆ ಆದೇಶಿಸಿದ್ದರು. ಅವರ ಆದೇಶದ ಮೇರೆಗೆ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪ ಪಟ್ಟಿಯು ಪ್ರಥಮ ಮಾಹಿತಿ ವರದಿ, ನಕ್ಷೆ ವೀಕ್ಷಣೆ, ಮರಣೋತ್ತರ ಪರೀಕ್ಷೆ ವರದಿ, ಚಲನ್, ಫೋಟೋ, ಪರೀಕ್ಷಾ ವರದಿ ಹೊಂದಿದೆ.
ಅತೀಕ್ ಅಹಮದ್ ಮತ್ತು ಆತನ ಸಹೋದರ ಅಶ್ರಫ್ ಹಲವು ದಶಕಗಳಿಂದ ಮಾಫಿಯಾ ಡಾನ್ ಆಗಿ ಹೆಸರು ಮಾಡಿದ್ದರು. ಪಾತಕ ಲೋಕದಲ್ಲಿ ಅವರಂತೆಯೇ ಹೆಸರು ಮಾಡುವ ಹುಚ್ಚುತದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದಲ್ಲದೇ ಇವರಿಗೆ ಪಿಸ್ತೂಲ್ಗಳನ್ನು ನೀಡದವರಾರು? ಪ್ರೇರೇಪಣೆಗೆ ಕಾರಣ ಏನು ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವಿವಿಧ ರೀತಿಯ ವೈಜ್ಞಾನಿಕ ಪುರಾವೆಗಳನ್ನೂ ಸಹ ಪೊಲೀಸರು ಚಾರ್ಜ್ ಶೀಟ್ನಲ್ಲಿ ದಾಖಲಿಸಿದ್ದಾರೆ.