ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ರಾಜಭವನದ ಎದುರೇ ಐದು ತಿಂಗಳ ಗರ್ಭಿಣಿಯೊಬ್ಬರಿಗೆ ಅವಧಿಗೂ ಮುನ್ನವೇ ಹೆರಿಗೆ ಆಗಿದ್ದು, ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಇಂದು (ಭಾನುವಾರ) ನಡೆದಿದೆ. ಆಂಬ್ಯುಲೆನ್ಸ್ ಸಿಗದ ಕಾರಣ ಕುಟುಂಬಸ್ಥರು ಗರ್ಭಿಣಿಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಮಾಲ್ ಅವೆನ್ಯೂ ಪ್ರದೇಶದ ನಿವಾಸಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಬಂದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆಂಬ್ಯುಲೆನ್ಸ್ಗೆ ಪದೇ ಪದೇ ಕರೆ ಮಾಡಿದರೂ ಬರಲಿಲ್ಲ. ಹೀಗಾಗಿ ರೀಕ್ಷಾದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ರಾಜಭವನದ ಗೇಟ್ ಸಂಖ್ಯೆ 15ರ ಮುಂದೆ ಸಾಗುತ್ತಿದ್ದಾಗ ಹೆರಿಗೆ ನೋವು ಇನ್ನೂ ಹೆಚ್ಚಾಯಿತು ಎಂದು ಕುಟುಂಬದ ಸಂಬಂಧಿಕರು ತಿಳಿಸಿದರು.
ಇದರಿಂದ ಅಲ್ಲಿಯೇ ರಿಕ್ಷಾ ನಿಲ್ಲಿಸಿ ದಾರಿಹೋಕರ ನೆರವಿನಿಂದ ಹೆರಿಗೆ ಮಾಡಿಸಲಾಯಿತು. ಆದಾಗ್ಯೂ, ಒಂದು ಗಂಟೆಯ ನಂತರ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತು. ತಾಯಿ ಮತ್ತು ನವಜಾತ ಶಿಶುವನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಶಿಶು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಇದು ಅವಧಿಪೂರ್ವ ಹೆರಿಗೆ ಎಂದು ವೈದ್ಯರು ತಿಳಿಸಿದರು.
ಕಾರಿನಲ್ಲಿ ಶವ ಸಾಗಿಸಿದ ಡಿಸಿಎಂ:ಈ ಘಟನೆಯ ಕುರಿತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತನಿಖೆಗೆ ಮಾಡಿಸುವಂತೆ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರಿಗೆ ಸೂಚಿಸಿದ್ದಾರೆ. ತಮ್ಮ ಪತ್ನಿಸಮೇತ ಬ್ರಜೇಶ್ ಪಾಠಕ್, ಝಲ್ಕರಿ ಬಾಯಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ತಾಯಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಶಿಶುವಿನ ಶವವನ್ನು ತಂದೆಯೊಂದಿಗೆ ತಮ್ಮ ಕಾರಿನಲ್ಲಿ ಚಿತಾಗಾರಕ್ಕೆ ಕರೆದೊಯ್ದು ಅಂತಿಮ ಸಂಸ್ಕಾರದಲ್ಲೂ ಪಾಲ್ಗೊಂಡರು.
ಸರ್ಕಾರದ ವಿರುದ್ಧ ಆಕ್ರೋಶ:ರಾಜಭವನದ ಸಮೀಪವೇ ನಡೆದ ಘಟನೆಯನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ''ರಾಜ್ಯ ಸರ್ಕಾರದ ಲಕ್ಷಾಂತರ ಜಾಹೀರಾತುಗಳು ಮತ್ತು ಘೋಷಣೆಗಳ ಹೊರತಾಗಿಯೂ ರಾಜ್ಯದ ಆರೋಗ್ಯ ವ್ಯವಸ್ಥೆ ವೆಂಟಿಲೇಟರ್‌ನಲ್ಲಿದೆ. ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಗೆ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ರಾಜಭವನದ ಬಳಿಯ ರಸ್ತೆಯಲ್ಲಿ ಹೆರಿಗೆ ಮಾಡಿಸುವಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ. ರಾಜ್ಯದ ಇಡೀ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯ ವಾಸ್ತವಕ್ಕೆ ಹಿಡಿದ ಕನ್ನಡಿ'' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:Pregnant Raped: ಹೆರಿಗೆಗೆ ಬಂದ ಏಳು ತಿಂಗಳ ಗರ್ಭಿಣಿ ಸಹೋದರಿ ಮೇಲೆ ಇಬ್ಬರು ಸಹೋದರರಿಂದ ಅತ್ಯಾಚಾರ