ಲಖನೌ(ಉತ್ತರ ಪ್ರದೇಶ):ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ನಡೆದ ಪರಿಷತ್ ಚುನಾವಣೆಯಲ್ಲೂ ಕಮಲ ಪಕ್ಷ ಗೆದ್ದು ಬೀಗಿದೆ.
36 ಸ್ಥಾನಗಳ ಪೈಕಿ ಬಿಜೆಪಿ 33ರಲ್ಲಿ ಗೆಲುವು ಪಡೆದಿದೆ. ಪ್ರತಿಪಕ್ಷ ಎಸ್‌ಪಿ ಯಾವುದೇ ಸ್ಥಾನಗಳಲ್ಲೂ ಗೆಲುವು ಸಾಧಿಸದೆ ಮುಖಭಂಗ ಅನುಭವಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
36 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದಂತೆ ಚುನಾವಣೆ ಸಂದರ್ಭದಲ್ಲಿ ಬುದೌನ್, ಹರ್ದೋಯ್, ಖೇರಿ, ಮಿರ್ಜಾಪುರ್-ಸೋನ್‌ಭದ್ರ, ಬಂದಾ-ಹಮೀರ್‌ಪುರ್, ಅಲಿಗಢ್, ಬುಲಂದ್ಶಹರ್ನಲ್ಲಿ ಗೆಲುವಿನ ನಗೆ ಬೀರಿದೆ. 100 ಪರಿಷತ್ ಸದಸ್ಯರ ಪೈಕಿ ಬಿಜೆಪಿ 35 ಸ್ಥಾನ ಪಡೆದುಕೊಂಡಿತ್ತು. ಇದೀಗ ಅದರ ಸ್ಥಾನ 44ಕ್ಕೆ ಏರಿಕೆಯಾಗಿದೆ. ಆದರೆ, ಬಹುಮತಕ್ಕೆ ಏಳು ಸ್ಥಾನ ಕಡಿಮೆ ಇದೆ. ಸಮಾಜವಾದಿ ಪಕ್ಷ 17 ಸದಸ್ಯರನ್ನು ಹೊಂದಿದ್ದು, ಬಿಎಸ್ಪಿ ನಾಲ್ಕು, ಕಾಂಗ್ರೆಸ್ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾದಳ, ನಿಶಾದ್ ಪಕ್ಷ ತಲಾ ಓರ್ವ ಸದಸ್ಯರನ್ನ ಹೊಂದಿದೆ.