ಬರೇಲಿ (ಉತ್ತರ ಪ್ರದೇಶ): ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಬಿಶ್ರತ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಗವಂತಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಮೃತ ಬಾಲಕಿಯನ್ನು ಭಗವಂತಪುರ ಗ್ರಾಮದ ನಿವಾಸಿ ಕುನ್ವರ್ ಸೇನ್ ಅವರ ಪುತ್ರಿ ಮಧು ಎಂದು ಗುರುತಿಸಲಾಗಿದೆ. ಕುನ್ವರ್ ಸೇನ್ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಲಕಿ ಮಧು ಕೆಲವು ಸ್ನೇಹಿತರೊಂದಿಗೆ ತಮ್ಮ ಮನೆಯ ಹೊರಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಳು. ಕಣ್ಣಾಮುಚ್ಚಾಲೆ ಆಟವಾಡುತ್ತ ಕಾರಿನೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದಳು. ತುಂಬಾ ಹೊತ್ತಾದರೂ ಮಗಳು ಮನೆಗೆ ಬಾರದಿರುವುದನ್ನು ಕಂಡು ಆಕೆಯ ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ್ದರು. ಎಲ್ಲಿಯೂ ಪತ್ತೆಯಾಗದಿದ್ದಾಗ ಕೊನೆಗೆ ಆಕೆಯ ತಂದೆ ಅಲ್ಲಿಯೇ ಪಕ್ಕದಲ್ಲಿದ್ದ ಕಾರಿನತ್ತ ಬಂದು ನೋಡಿದಾಗ ಮಗಳು ಕಾರಿನೊಳಗೆ ಇರುವುದು ಗೊತ್ತಾಗಿದೆ. ತಕ್ಷಣ ಕಾರಿನ ಮಾಲೀಕರಿಂದ ಕೀ ತರಿಸಿಕೊಂಡು ಡೋರ್ ತೆರೆದು ಆಕೆಯನ್ನು ಹೊರಗೆ ತರಲಾಯಿತು. ಅಲ್ಲದೇ ಹತ್ತಿರದ ಆಸ್ಪತ್ರೆಗೂ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಬಾಲಕಿ ಮಧು ಮೃತಪಟ್ಟಿದ್ದಳು.
ಕಾರಿನೊಳಗೆ ಹೋಗಿ ಬಚ್ಚಿಟ್ಟುಕೊಂಡ ತಕ್ಷಣ ಕಾರಿನ ಡೋರ್ ಲಾಕ್ ಆಗಿದೆ. ಚೈಲ್ಡ್ ಲಾಕ್ ಸಿಸ್ಟಂ ಆಕ್ಟಿವೇಟ್ ಆಗಿದ್ದರಿಂದ ಮಧು ಕಾರಿನೊಳಗೆ ಸಿಲುಕಿಕೊಂಡಿದ್ದಾಳೆ. ಬಳಿಕ ಹೊರಬರಲಾರದೇ ಉಸಿರುಗಟ್ಟಿ ಅಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೊಲೀಸರು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮನೆಯಲ್ಲಿ ಓಡಾಡಿಕೊಂಡಿದ್ದ ಮುದ್ದು ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರ ಆಕ್ರಂದನಕ್ಕೆ ಗ್ರಾಮಸ್ಥರು ಕೂಡ ಮಮ್ಮಲ ಮರುಗಿದರು.