ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ ರಾಜ್ಯಸಭಾ ಉಪ ಚುನಾವಣೆ: ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ, ಗೆಲುವು ಬಹುತೇಕ ಖಚಿತ - ಒಂದು ದೇಶ ಒಂದು ಚುನಾವಣೆ

ಮುಂಬರುವ ಉತ್ತರ ಪ್ರದೇಶ ರಾಜ್ಯಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರ ಹೆಸರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಕಟಿಸಿದೆ.

Dinesh Sharma
ದಿನೇಶ್ ಶರ್ಮಾ

By ETV Bharat Karnataka Team

Published : Sep 4, 2023, 9:39 AM IST

ನವದೆಹಲಿ :ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಯುಪಿ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5 ಆಗಿದ್ದು, ಸೆ. 15 ರಂದು ಉಪಚುನಾವಣೆ ನಡೆಯಲಿದೆ. ರಾಜ್ಯಸಭಾ ಸದಸ್ಯ ಹರಿದ್ವಾರ್​ ದುಬೆ ಅವರ ನಿಧನದಿಂದ ಈ ಸ್ಥಾನ ತೆರವಾಗಿದ್ದು, ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ದುಬೆ ಬಿಜೆಪಿಯಿಂದಲೇ ರಾಜ್ಯಸಭಾ ಸದಸ್ಯರಾಗಿದ್ದರು. ಈ ಸ್ಥಾನದ ಅವಧಿಯು ನವೆಂಬರ್ 2026 ಕ್ಕೆ ಕೊನೆಗೊಳ್ಳಲಿದೆ.

ಧನ್ಯವಾದ ತಿಳಿಸಿದ ದಿನೇಶ್ ಶರ್ಮಾ : ಭಾರತೀಯ ಜನತಾ ಪಕ್ಷವು ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಿದ ನಂತರ ಉತ್ತರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದಲ್ಲಿನ ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಪ್ರಬಲ ಬಹುಮತ ಪಡೆದಿರುವ ಕಾರಣ ಶರ್ಮಾ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ದುಬೆಯಂತೆಯೇ ಇವರೂ ಸಹ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, 2017-22ರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಶರ್ಮಾ ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಜೊತೆಗೆ, ಲಕ್ನೋ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರನ್ನು ಗುಜರಾತ್‌ನಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಮೊದಲ ಬಾರಿಗೆ 2008 ರಲ್ಲಿ ಲಕ್ನೋದ ಮೇಯರ್ ಆಗಿ ಆಯ್ಕೆಯಾಗಿದ್ದರು.

ಜೊತೆಗೆ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಮುಖ್ಯಸ್ಥರಾಗಿ ಹಾಗೂ ಲಖನೌ ಮಹಾನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಶರ್ಮಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅಕ್ಟೋಬರ್ 2016 ರಲ್ಲಿ ಲಖನೌದಲ್ಲಿ ರಾಮಲೀಲಾದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯತ್ವ ಅಭಿಯಾನದಲ್ಲಿ (2014-15) ರಲ್ಲಿ 10 ಕೋಟಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕಗಳು ಸಹ ಶೀಘ್ರದಲ್ಲೇ ಘೋಷಣೆಯಾಗಲಿದೆ. ಬಳಿಕ, 2024 ರ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುವುದು. ಇದಕ್ಕೂ ಮುನ್ನ ಒಂದು ದೇಶ ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ :One nation one election: ಒಂದು ದೇಶ ಒಂದು ಚುನಾವಣೆ ಹಿಂದೆ ಸಾಕಷ್ಟು ಅನುಮಾನಗಳಿವೆ.. ಸಚಿವ ಹೆಚ್ ಕೆ ಪಾಟೀಲ್

ABOUT THE AUTHOR

...view details