ಲಖನೌ(ಉತ್ತರ ಪ್ರದೇಶ): 403 ವಿಧಾನಸಭೆ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದಲ್ಲಿಂದು ಕೊನೆಯ ಹಂತದಲ್ಲಿ 54 ಕ್ಷೇತ್ರಗಳಿಗೆ ವೋಟಿಂಗ್ ನಡೆದಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ. 54.18ರಷ್ಟು ಮತದಾನವಾಗಿದೆ. ಈ ಮೂಲಕ ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ಚುನಾವಣಾ ಯುದ್ಧಕ್ಕೆ ತೆರೆ ಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 54 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಇದರ ಜೊತೆಗೆ ಅಜಂಗಢ, ಗಾಜಿಪುರ, ಜಾನ್‌ಪುರ್, ಮಿರ್ಜಾಪುರ, ಗಾಜಿಪುರ, ಚಂದೌಲಿ ಮತ್ತು ಸೋನ್‌ಭದ್ರದಲ್ಲೂ ವೋಟಿಂಗ್ ನಡೆದಿದೆ. 12,205 ಕೇಂದ್ರಗಳ 23,535 ಬೂತ್ಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನವಾಗಿದೆ.
ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಿಗದಿಯಾಗಿತ್ತು. ಫೆ. 10,14,20,23, 27,ಮಾರ್ಚ್ 3 ಮತ್ತು 7ರಂದು ನಿಗದಿಯಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತವಾಗಿ ಮತದಾನವಾಗಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ವಿವಿಪ್ಯಾಟ್ನಲ್ಲಿ ಭದ್ರವಾಗಿದೆ.