ಹತ್ರಾಸ್ (ಉತ್ತರ ಪ್ರದೇಶ): ಮದ್ಯ ವ್ಯಸನಿ ತಂದೆಯೋರ್ವ ಎರಡೂವರೆ ತಿಂಗಳ ಮಗುವನ್ನು ಎತ್ತಿ ಮಂಚಕ್ಕೆ ಎಸೆದು ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯ ಜನರೇ ಹಂತಕ ತಂದೆಯನ್ನು ಹಿಡಿದು ಆತನ ಕೈಕಾಲು ಕಟ್ಟಿ ಹಾಕಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಲ್ಲಿನ ಸಾಸ್ನಿ ಪ್ರದೇಶದ ಖೇಡಾ ಫಿರೋಜ್‌ಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಈ ದಾರುಣ ಘಟನೆ ನಡೆದಿದೆ. ಯೋಗೇಶ್ ಎಂಬಾತನೇ ಮಗುವನ್ನು ಕೊಂದ ಪಾಪಿ ತಂದೆ ಎಂದು ಗುರುತಿಸಲಾಗಿದೆ. ಆರೋಪಿ ಯೋಗೇಶ್ನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಪಿ ಯೋಗೇಶ್ ಕುಡಿತದ ಚಟ ಹೊಂದಿದ್ದಾನೆ. ಶನಿವಾರ ರಾತ್ರಿ ಸಹ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಅಲ್ಲದೇ, ಆಗಾಗ್ಗೆ ಮನೆಯಲ್ಲಿ ಜಗಳವಾಡುತ್ತಿದ್ದ ಆರೋಪಿ, ಕುಟುಂಬ ಸದಸ್ಯರನ್ನು ನಿಂದಿಸುತ್ತಿದ್ದ. ಅದೇ ರೀತಿಯಾಗಿ ಶನಿವಾರ ಕೂಡ ಪತ್ನಿಯೊಂದಿಗೆ ಜಗಳವಾಡ ತೊಡಗಿದ್ದ. ಆಗ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದ್ದರು. ಈ ವೇಳೆ ಅವರೊಂದಿಗೂ ಯೋಗೇಶ್ ಜಗಳ ಆರಂಭಿಸಿದ್ದ.
ಇದನ್ನೂ ಓದಿ:2 ವರ್ಷದ ಮಗಳ ಕೊಂದು, ಬಟ್ಟೆಯಲ್ಲಿ ಶವ ಸುತ್ತಿ ಕೆರೆಗೆ ಎಸೆದ ತಂದೆ
ಇದೇ ಜಗಳದಲ್ಲಿ ಮಂಚದ ಮೇಲೆ ಮಲಗಿದ್ದ ಎರಡೂವರೆ ತಿಂಗಳ ಮಗುವನ್ನು ಯೋಗೇಶ್ ಎತ್ತಿಕೊಂಡಿದ್ದಾನೆ. ಇದಾದ ನಂತರ ತಕ್ಷಣವೇ ಮಗುವನ್ನು ಮಂಚದ ಮೇಲೆ ಎತ್ತಿ ಎಸೆದಿದ್ದಾನೆ. ಇದರಿಂದ ಮಂಚದ ಬದಿಗೆ ಮಗುವಿನ ತಲೆ ಬಡಿದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಯ ವಿಷಯ ತಿಳಿದು ಇಡೀ ಗ್ರಾಮಸ್ಥರು ಮನೆ ಬಳಿ ಬಂದು ಸೇರಿದ್ದಾರೆ. ಅನೇಕರು ಸ್ಥಳದಲ್ಲಿ ಜಮಾಯಿಸಿ, ಆರೋಪಿ ಯೋಗೇಶ್ನನ್ನು ಹಿಡಿದಿದ್ದಾರೆ. ಅಲ್ಲದೇ, ಆತನ ಕೈಕಾಲು ಕಟ್ಟಿ ಅಲ್ಲಿಯೇ ಬಂಧಿಸಿಟ್ಟಿದ್ದಾರೆ.
ಯೋಗೀಶ್ ಮೊದಲು ತನ್ನ ಹೆಂಡತಿಗೆ ಥಳಿಸಿದ. ಇದನ್ನು ಪ್ರಶ್ನಿಸಿದಾಗ ಎಲ್ಲರೊಂದಿಗೂ ಗಲಾಟೆ ಶುರು ಮಾಡಿದ. ಇದರ ನಡುವೆ ಮಂಚದ ಮೇಲೆ ಮಲಗಿದ್ದ ಮುಗ್ಧ ಮಗನನ್ನು ಎತ್ತಿಕೊಂಡು ಕೃತ್ಯ ಎಸಗಿದ ಎಂದು ಮೃತ ಮಗುವಿನ ಅಜ್ಜ ಘನಶ್ಯಾಮ್ ತಿಳಿಸಿದ್ದಾರೆ. ಮತ್ತೊಂದೆಡೆ, ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಗ ಆರೋಪಿಯನ್ನು ಸ್ಥಳೀಯರ ಪೊಲೀಸರಿಗೆ ಒಪ್ಪಿಸಿದ್ದಾರೆ. ಘನಶ್ಯಾಮ್ ನೀಡಿದ ದೂರಿನ ಮೇರೆಗೆ ಆರೋಪಿ ಯೋಗೇಶ್ ವಿರುದ್ಧ ಕೇಸ್ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಾಸ್ನಿ ಇನ್ಸ್‌ಪೆಕ್ಟರ್ ಜೋಗೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಮದ್ಯಕ್ಕೆ ಹಣ ಹೊಂದಿಸಲು ಆರು ತಿಂಗಳ ಮಗು ಮಾರಾಟ.. ಪಾಪಿ ಅಪ್ಪ, ಅಮ್ಮ, ಅಜ್ಜ ಸೆರೆ