ಕರ್ನಾಟಕ

karnataka

ETV Bharat / bharat

ಜಮೀನು ವಿವಾದ: ರಾಜ್ಯಪಾಲರಿಗೆ ಸಮನ್ಸ್​ ಜಾರಿ ಮಾಡಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​! - ರಾಜ್ಯಪಾಲೆ ಆನಂದಿಬೆನ್​ ಪಟೇಲ್

ಉತ್ತರ ಪ್ರದೇಶದಲ್ಲಿ ಜಮೀನು ವಿವಾದವೊಂದರಲ್ಲಿ ರಾಜ್ಯಪಾಲೆ ಆನಂದಿಬೆನ್​ ಪಟೇಲ್​ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ನ್ಯಾಯಾಲಯವು ಸಮನ್ಸ್​ ಜಾರಿ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

uttar-pradesh-badaun-sdm-summons-governor-anandiben-patel-from-judicial-court
ಜಮೀನು ವಿವಾದದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಿಗೆ ಸಮನ್ಸ್​ ಜಾರಿ ಮಾಡಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್

By ETV Bharat Karnataka Team

Published : Oct 27, 2023, 8:11 PM IST

ಬದೌನ್ (ಉತ್ತರ ಪ್ರದೇಶ):ಜಮೀನು ವಿವಾದವೊಂದರಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್​ ಪಟೇಲ್​ ಅವರ ಹೆಸರಿಗೆ ಬದೌನ್‌ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ (ಎಸ್‌ಡಿಎಂ) ನ್ಯಾಯಾಲಯದಿಂದ ಸಮನ್ಸ್​ ಜಾರಿ ಮಾಡಲಾಗಿದೆ. ಇದು ರಾಜ್ಯಾದ್ಯಂತ ಚರ್ಚೆಗೀಡು ಮಾಡಿದೆ. ರಾಜಭವನವು ಮ್ಯಾಜಿಸ್ಟ್ರೇಟ್​ ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಅಕ್ಟೋಬರ್ 10ರಂದು ಆನಂದಿಬೆನ್ ಪಟೇಲ್ ಅವರ ಹೆಸರಿಗೆ ಈ ಸಮನ್ಸ್​ ನೀಡಲಾಗಿದೆ. ಅ.18ರಂದು ತಮ್ಮ ಪ್ರತಿನಿಧಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಸಮನ್ಸ್​ನಲ್ಲಿ ಸೂಚಿಸಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜಪಾಲರಿಗೆ ಸಮನ್ಸ್​ ನೀಡಿರುವ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬದೌನ್‌ ಜಿಲ್ಲೆ ಮಾತ್ರವಲ್ಲದೇ, ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪತ್ರ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಸಮನ್ಸ್

ಯಾವುದೇ ಕೋರ್ಟ್​ಗೆ ರಾಜಪಾಲರು ಉತ್ತರದಾಯಿ ಅಲ್ಲ:ಮ್ಯಾಜಿಸ್ಟ್ರೇಟ್​ನ ಸಮನ್ಸ್​ ಕುರಿತು ಬದೌನ್‌ ಜಿಲ್ಲಾಧಿಕಾರಿಗೆ ರಾಜಪಾಲರ ವಿಶೇಷ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ''ಸಂವಿಧಾನದ ಅರ್ಟಿಕಲ್​ 361ರ ಪ್ರಕಾರ, ಗೌರವಾನ್ವಿತ ರಾಜಪಾಲರು ಯಾವುದೇ ಕೋರ್ಟ್​ಗೆ ಉತ್ತರದಾಯಿಗಳು ಅಲ್ಲ. ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠದ ಆದೇಶದ ಪ್ರಕಾರ, ರಾಜ್ಯಪಾಲರನ್ನು ಕೋರ್ಟ್​ ಮುಂದೆ ಯಾವುದೇ ಪಕ್ಷದ ಪರವಾಗಿ ಎಳೆಯಲು ಆಗಲ್ಲ. ಯಾವುದೇ ನೋಟಿಸ್ ​ಜಾರಿ ಮಾಡುವಂತಿಲ್ಲ'' ಎಂದು ತಮ್ಮ ಪತ್ರದ ಮೂಲಕ ಅಧಿಕಾರಿಗಳಿಗೆ ತಿಳಿಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ: ಇಡೀ ಪ್ರಕರಣವು ಪೊಲೀಸ್ ಠಾಣಾ ವ್ಯಾಪ್ತಿಯ ಲೋಡಾ ಬಹೇದಿ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿದೆ. ಗ್ರಾಮದ ನಿವಾಸಿ ಚಂದ್ರಹಾಸ್ ಎಂಬವರು ತಮ್ಮ ಸಂಬಂಧಿ ಕಟೋರಿ ದೇವಿ ಅವರಿಗೆ ಸೇರಿ ಆಸ್ತಿಯನ್ನು ಮತ್ತೊಬ್ಬರಿಗೆ ಹೆಸರಿಗೆ ನೋಂದಾಯಿಸಲಾಗಿದೆ ಎಂದು ಆರೋಪಿಸಿ ಎಸ್‌ಡಿಎಂ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ, ಆ ಭೂಮಿಯ ಸ್ವಲ್ಪ ಭಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರದಿಂದ ನೀಡಲಾದ 12 ಲಕ್ಷ ರೂ. ಹಣವು ಲೇಖರಾಜ್ ಎಂಬುವವರಿಗೆ ನೀಡಲಾಗಿದೆ ಎಂದೂ ಅವರು ದೂರಿದ್ದಾರೆ.

ಕಟೋರಿ ದೇವಿ ಅವಿವಾಹಿತೆಯಾಗಿದ್ದು, ಅವರ ನಿಧನದ ನಂತರ ಆಸ್ತಿ ನನಗೆ ಸೇರಬೇಕಿತ್ತು. ಆದರೆ, ಬೇರೆಯವರ ಹೆಸರಿಗೆ ಜಮೀನು ಹಾಗೂ ಅದರ ಪರಿಹಾರದ ಹಣ ಕೂಡ ಹೋಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪರಿಹಾರದ ಹಣ ಪಡೆದ ಲೇಖ್‌ರಾಜ್, ಲೋಕೋಪಯೋಗಿ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನೂ ಪ್ರತಿವಾದಿಯನ್ನಾಗಿ ಅವರಿಗೆ ಸಮನ್ಸ್​ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ದೂರದಾರ ಚಂದ್ರಹಾಸ್ ಪ್ರತಿಕ್ರಿಯಿಸಿ, "ಮ್ಯಾಜಿಸ್ಟ್ರೇಟ್​ನ ಅಧಿಕಾರಿಗಳು, ಯಾರ ಪರವಾಗಿ, ಯಾರಿಗೆ ಸಮನ್ಸ್​ ನೀಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ತಮಿಳುನಾಡಿನ ನೀಟ್​ ವಿರೋಧಿ ಮಸೂದೆಗೆ ಒಪ್ಪಿಗೆ ನೀಡಿ: ರಾಷ್ಟ್ರಪತಿ ಮುರ್ಮುಗೆ ಸ್ಟಾಲಿನ್ ಮನವಿ

ABOUT THE AUTHOR

...view details