ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಗುರುವಾರ 6ನೇ ಹಂತದ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ಮುಖಂಡರ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 57 ಕ್ಷೇತ್ರಗಳಲ್ಲಿ ವೋಟಿಂಗ್ ಆಗಲಿದ್ದು ಯೋಗಿ ಆದಿತ್ಯನಾಥ್, ಕಾಂಗ್ರೆಸ್ನ ಅಜಯ್ ಕುಮಾರ್ ಲಾಲು ಹಾಗೂ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಯುಪಿಯಲ್ಲಿ ನಾಳೆ 6ನೇ ಹಂತದ ವೋಟಿಂಗ್: ಸಿಎಂ ಯೋಗಿ ಸೇರಿ ಪ್ರಮುಖರ ಭವಿಷ್ಯ ನಿರ್ಧಾರ - ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ನಾಳೆ 6ನೇ ಹಂತದ ಮತದಾನ ನಡೆಯಲಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ 292 ಕ್ಷೇತ್ರಗಳಿಗೆ 5 ಹಂತಗಳಲ್ಲಿ ಮತದಾನವಾಗಿದೆ. ಉಳಿದ 111 ಕ್ಷೇತ್ರಗಳಿಗೆ 6 ಮತ್ತು 7ನೇ ಹಂತದಲ್ಲಿ ಮತದಾನವಾಗಲಿದೆ. ನಾಳೆ ಅಂಬೇಡ್ಕರ್ನಗರ, ಬಲ್ರಾಮ್ಪುರ್, ಸಿದ್ಧಾರ್ಥನಗರ, ಬಸ್ತಿ, ಶಾಂತಿ ಕಬೀರ್ ನಗರ, ಗೋರಖ್ಪುರ್ ಹಾಗು ಕುಶಿನಗರದಲ್ಲಿ ವೋಟಿಂಗ್ ನಡೆಯಲಿದೆ.
2017ರ ವಿಧಾನಸಭೆ ಚುನಾವಣೆಯ ವೇಳೆ 57 ಕ್ಷೇತ್ರಗಳ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ, ಈ ಸಲದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ನಾಳೆಯ ಚುನಾವಣೆ ಕಣದಲ್ಲಿ 676 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಒಟ್ಟು 2.14 ಕೋಟಿ ಮತದಾರರು ಇವರ ಭವಿಷ್ಯ ಬರೆಯಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ, ಗೋವಾ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಬಹಿರಂಗಗೊಳ್ಳಲಿದೆ.