ಹೈದರಾಬಾದ್ :ತಮಿಳುನಾಡಿನ ಹೊಸೂರು ಪ್ರದೇಶದಲ್ಲಿ ಎಲೆಕ್ಟ್ರಿಕ್ ಬೈಕ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಮಾಲೀಕ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆರಂಭದಲ್ಲಿ ಬೆಂಕಿ ತಗ್ಗಿದರೂ ಕೆಲವೇ ನಿಮಿಷಗಳಲ್ಲಿ ಭಾರೀ ಸದ್ದಿನೊಂದಿಗೆ ಬೈಕ್ ಸ್ಫೋಟಗೊಂಡಿದೆ. ಅಂತಹ ಸಂದರ್ಭದಲ್ಲಿ ನೀರು ಹಾಕುವುದು ಸಾಮಾನ್ಯವಾಗಿ ಬೆಂಕಿ ನಂದಿಸಲು ಸಹಕರಿಸುತ್ತದೆ. ಆದರೆ, ಇಲ್ಲಿ ವಾಹನ ಸ್ಪೋಟಗೊಂಡು ಸುಟ್ಟು ಕರಕಲಾದ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿತ್ತು.
ನೀರನ್ನು ಬಳಸಲೇಬೇಡಿ :ಈ ಘಟನೆ ಜನರಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ನಂದಿಸುವುದು ಹೇಗೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ತಜ್ಞರು ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಂಡಾಗ ಅದನ್ನು ನಂದಿಸಲು ಯಾವುದೇ ಸಂದರ್ಭದಲ್ಲೂ ನೀರನ್ನು ಬಳಸಬಾರದು ಎಂದು ಎಚ್ಚರಿಸಿದ್ದಾರೆ. ನೀರು ಸಿಂಪಡಿಸುವಾಗ ಇವಿಗಳ ಬ್ಯಾಟರಿಗಳಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆ ಅಪಘಾತದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ.
ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕುಗಳು ಸಾಮಾನ್ಯವಾಗಿ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಲಿಸುತ್ತವೆ. ಕೆಲವೊಂದು ಬಾರಿ ಉತ್ಪಾದನಾ ದೋಷಗಳು ಮತ್ತು ದೋಷಯುಕ್ತ ಪ್ಯಾಕೇಜಿಂಗ್, ಬ್ಯಾಟರಿಯ ಅಧಿಕ ತಾಪಕ್ಕೆ ಕಾರಣವಾಗುತ್ತದೆ.
ಎಬಿಸಿ ಪೌಡರ್ ಬಳಕೆ ಉತ್ತಮ : ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿಗಳಲ್ಲಿನ ಸಾವಯವ-ಆಧಾರಿತ ವಿದ್ಯುದ್ವಿಚ್ಛೇದ್ಯಗಳು ಆಂತರಿಕ ರಾಸಾಯನಿಕ ಕ್ರಿಯೆಗಳಿಂದಲೂ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಬಹುದು. ಯಾವಾಗ ಅದು ನೀರಿನೊಂದಿಗೆ ಬೆರೆಯುತ್ತದೆಯೋ ಆಗ ಹೈಡ್ರೋಜನ್ ಅನಿಲ ಮತ್ತು ಲಿಥಿಯಂ ಹೈಡ್ರಾಕ್ಸೈಡ್ ಉತ್ಪತ್ತಿಯಾಗುತ್ತದೆ. ಹೈಡ್ರೋಜನ್ ಅನಿಲದ ಸುಡುವ ಸ್ವಭಾವದಿಂದಾಗಿ, ವಾಹನವು ಸ್ಫೋಟಗೊಳ್ಳಬಹುದು.