ನವದೆಹಲಿ:5ನೇ ಭಾರತ-ಯುಎಸ್ 2+2 ಸಚಿವರ ಸಂವಾದದ ಸಹ-ಅಧ್ಯಕ್ಷತೆಗಾಗಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್ ಅವರು ಕಳೆದ ರಾತ್ರಿ ನವದೆಹಲಿಗೆ ಬಂದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿ, ''ಆ್ಯಂಟೋನಿ ಜೆ. ಬ್ಲಿಂಕನ್ ಅವರಿಗೆ ಆತ್ಮೀಯ ಸ್ವಾಗತ. ಈ ಭೇಟಿಯು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ'' ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಆಗಮನ:ಇದಕ್ಕೂ ಮುನ್ನ ಗುರುವಾರ, ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸಚಿವರ ಸಂವಾದದಲ್ಲಿ ಭಾಗವಹಿಸಲು ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಬಂದಿಳಿದಿದ್ದಾರೆ. ಸಚಿವ ರಾಜನಾಥ್ ಸಿಂಗ್ ಬರಮಾಡಿಕೊಂಡಿದ್ದರು. ಈ ಭೇಟಿಯ ಬಳಿಕ ಅವರು, ಕೊರಿಯಾ ಮತ್ತು ಇಂಡೋನೇಷ್ಯಾಕ್ಕೆ ಪ್ರಯಾಣಿಸಲಿದ್ದಾರೆ.
"ನಮ್ಮ ಮಿತ್ರರಾಷ್ಟ್ರಗಳ ಜೊತೆಗೆ ಯುಎಸ್ ಮುಕ್ತ ಪಾಲುದಾರಿಕೆ ಹೊಂದಿದೆ. ಇದರಿಂದ ಐತಿಹಾಸಿಕ ಪ್ರಗತಿ ಮುಂದುವರಿಯಲು ಸಾಧ್ಯವಾಗಿದೆ. ಇಂಡೋ-ಪೆಸಿಫಿಕ್‌ಗೆ ನಾನು 9ನೇ ಬಾರಿ ಭೇಟಿ ಕೊಟ್ಟಿದ್ದೇನೆ" ಎಂದು ಲಾಯ್ಡ್ ಆಸ್ಟಿನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಲಿಂಕನ್ ಭಾರತ ಭೇಟಿಯ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಮಾತನಾಡಿ, "ಲಾಯ್ಡ್ ಜೆ.ಆಸ್ಟಿನ್ ಹಾಗೂ ಬ್ಲಿಂಕೆನ್ 2+2 ಸಚಿವರ ಸಂವಾದಕ್ಕೆ ತೆರಳಿದ್ದಾರೆ. ನಮ್ಮೊಂದಿಗೆ ಭಾರತ ಆಳವಾದ ಪಾಲುದಾರಿಕೆ ಹೊಂದಿರುವ ದೇಶವಾಗಿದೆ. ಭದ್ರತಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವುದೂ ಸೇರಿದಂತೆ ಇನ್ನೂ ಚರ್ಚೆಯಾಗದ ಹಲವು ವಿಷಯಗಳ ಕುರಿತು ಮಾತುಕತೆ ನಡೆಯುವುದನ್ನು ನಾವು ನಿರೀಕ್ಷಿಸುತ್ತೇವೆ" ಎಂದು ತಿಳಿಸಿದ್ದಾರೆ.
ವಿವಿಧ ವಿಷಯಗಳ ಕುರಿತು ಮಾತುಕತೆ:ಯುಎಸ್ ಮತ್ತು ಭಾರತದ ನಡುವಿನ ಉನ್ನತ ಮಟ್ಟದ ಚರ್ಚೆಗಳಿಗೆ ಈ ಸಂವಾದ ವೇದಿಕೆ ಒದಗಿಸುತ್ತದೆ. ನಿರ್ಣಾಯಕ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತೆರೆದುಕೊಳ್ಳುವ ಬೆಳವಣಿಗೆಗಳಿಗೆ ವಿಶೇಷ ಒತ್ತು ನೀಡುತ್ತದೆ. ಬ್ಲಿಂಕನ್ ಮತ್ತು ಆಸ್ಟಿನ್ ಅವರು ತಮ್ಮ ಭಾರತೀಯ ಸಹವರ್ತಿಗಳಾದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಈ ಮಾತುಕತೆಯಿಂದ ದ್ವಿಪಕ್ಷೀಯ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸಹಕಾರ ಉತ್ತೇಜಿಸುವುದು ಸೇರಿದಂತೆ ವಿವಿಧ ವಿಷಯಗಳು ಒಳಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ:ಭಾರತೀಯ ಅಕ್ರಮ ವಲಸಿಗರಿಗೆ ಇನ್ನು ಆಶ್ರಯ ನೀಡಲ್ಲ ಯುಕೆ; ಭಾರತ, ಜಾರ್ಜಿಯಾ ಸೇಫ್ ಕಂಟ್ರಿ ಲಿಸ್ಟ್ಗೆ ಸೇರ್ಪಡೆ