ನವದೆಹಲಿ:ಆಫ್ಘನ್ ನೆಲದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ತಾಯ್ನಾಡಿಗೆ ಮರಳಿದೆ. ಈ ನಡುವೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಜೋ ಬೈಡನ್ ಆಫ್ಘನ್ನಲ್ಲಿ ನಾವು ಜಯ ದಾಖಲಿಸಿದ್ದೇವೆ, ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡಿದ್ದೇವೆ ಎಂದಿದ್ದಾರೆ.
ಆಫ್ಘನ್ನಿಂದ ಸೇನೆ ಹಿಂಡೆಯುವ ನಿರ್ಧಾರವು ಸೇನಾ ಮುಖ್ಯಸ್ಥ, ಕಮಾಂಡರ್, ಮಿಲಿಟರಿ ಸಲಹೆಗಾರರು ಹಾಗೂ ಇಲ್ಲಿನ ನಾಗರಿಕರ ಒಕ್ಕೂರಲ ಶಿಫಾರಸಾಗಿತ್ತು. ನಾವು ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಶಾಂತಿ ಕಾಪಾಡಿದ್ದೇವೆ. ನಾವು ಮಾಡಿದ ಈ ಕೆಲಸ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ತಾಲಿಬಾನ್ ಆಳ್ವಿಕೆಯಿಂದ ಹೊರಬರಲು ಇಚ್ಛಿಸಿದವರನ್ನು ರಕ್ಷಿಸಿದ್ದೇವೆ, ನಾವು ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಅಲ್ಲಿಂದ ಸ್ಥಳಾಂತರಿಸಿದ್ದೇವೆ. ಜೊತೆಗೆ ಕಾಬೂಲ್ನ ವಿಮಾನ ನಿಲ್ದಾಣದಕ್ಕೆ ಭದ್ರತೆ ನೀಡಿದ್ದೇವೆ ಎಂದಿದ್ದಾರೆ.
ಆಫ್ಘನ್ ಭೂಮಿಯನ್ನ ನಮ್ಮ ವಿರುದ್ಧ ಅಥವಾ ಜಗತ್ತಿನ ಬೇರೆ ಯಾವುದೇ ದೇಶದ ವಿರುದ್ಧ ಉಗ್ರವಾದದ ಕಾರ್ಯಕ್ಕಾಗಿ ಬಳಸಬಾರದು. ನಾವು ಇಡೀ ಜಗತ್ತನ್ನು ಸುರಕ್ಷಿತವಾಗಿಡಲು ಬಯಸುತ್ತೇವೆ. ಸೋಮಾಲಿಯಾ ಮತ್ತು ಇತರ ದೇಶಗಳ ಪರಿಸ್ಥಿತಿಯನ್ನ ನೀವು ನೋಡಿದ್ದೀರಿ. ಯುಎಸ್ ಸೇನೆ ಇಲ್ಲದೇ ತಮ್ಮನ್ನು ತಾವು ಹೇಗೆ ಬಲಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾಲ ನಿರ್ಧರಿಸಲಿದೆ ಎಂದಿದ್ದಾರೆ.
ಆದರೆ, ನಮ್ಮ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಎಡು ದಶಕಗಳ ಹಿಂದಿನ ಸನ್ನಿವೇಶವನ್ನ ಗಮನಿಸಿ ನಿರ್ಧಾರ ಮಾಡಿದ್ದೆವು. ನಾವೀಗ ಚೀನಾ ಮತ್ತು ರಷ್ಯಾದೊಂದಿಗೆ ಸ್ಪರ್ಧೆಯಲ್ಲಿದ್ದೇವೆ. ಮಹಿಳೆಯರು ಹಾಗೂ ಮಕ್ಕಳ ಹಕ್ಕಿಗಾಗಿ ಪ್ರಪಂಚದಾದ್ಯಂತ ಹೋರಾಡಲು ನಾವು ಎಂದಿಗೂ ಸಿದ್ಧರಾಗಿದ್ದೇವೆ. ಮಾನವ ಹಕ್ಕುಗಳ ರಕ್ಷಣೆಗೆ ನಾವೆಂದು ಬದ್ಧರಾಗಿರುತ್ತೇವೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್.
ಓದಿ:ಕಾಶ್ಮೀರದ ವಿಷಯದಲ್ಲಿ ತಾಲಿಬಾನ್ ಜತೆ ಭಾರತ ಒಪ್ಪಂದ ಮಾಡಿಕೊಳ್ಳುತ್ತದೆಯೇ?