ನವದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಅಧಿಕೃತ ಪ್ರವಾಸದ ನಡುವೆ ಭಾರತ- ಅಮೆರಿಕ ದೇಶಗಳ ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ನಿರ್ಮಾಣವಾಗಿದೆ. ಅಮೆರಿಕದ ಪ್ರತಿಷ್ಟಿತ ವಿಮಾನ ಇಂಜಿನ್ ಪೂರೈಕೆದಾರ ಕಂಪನಿ ಜಿಇ ಏರೋಸ್ಪೇಸ್ ಗುರುವಾರ ಹೆಚ್ಎಎಲ್ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತೀಯ ವಾಯುಪಡೆಗೆ ಲಘು ಯುದ್ಧ ವಿಮಾನ (ಎಲ್‌ಸಿಎ) ಎಂಕೆ– 11 ತೇಜಸ್‌ಗಾಗಿ ಫೈಟರ್ ಜೆಟ್ ಇಂಜಿನ್‌ಗಳನ್ನು ಜಂಟಿಯಾಗಿ ತಯಾರಿಸುವ ಸಂಬಂಧ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಇ ಏರೋಸ್ಪೇಸ್ ತಿಳಿಸಿದೆ. ಈ ಒಪ್ಪಂದವು ಭಾರತದಲ್ಲಿ ಜಿಇ ಏರೋಸ್ಪೇಸ್‌ನ F414 ಎಂಜಿನ್‌ಗಳ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ. ಓಹಿಯೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಏರೋಸ್ಪೇಸ್ ಕಂಪನಿಯು ಇದಕ್ಕೆ ಅಗತ್ಯವಾದ ರಫ್ತು ಸರಕುಗಳನ್ನು ಪಡೆಯಲು ಅಮೆರಿಕ ಸರ್ಕಾರದೊಂದಿಗೆ ಕೆಲಸ ಮಾಡಲಿದೆ ಎಂದು ಪ್ರಕಟಿಸಿದೆ. ಈ ಪ್ರಯತ್ನವು IAFನ ಲಘು ಯುದ್ಧ ವಿಮಾನ (LAC) Mk2 ಕಾರ್ಯಕ್ರಮದ ಭಾಗ ಎಂದು ಮಾಹಿತಿ ನೀಡಿದೆ.
ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರ ಬಲಪಡಿಸುವಲ್ಲಿ ಹೆಚ್‌ಎಎಲ್ ಜೊತೆಗಿನ ತಿಳುವಳಿಕೆ ಒಪ್ಪಂದವು ಪ್ರಮುಖ ಅಂಶವಾಗಿದೆ ಎಂದು ಜಿಇ ತಿಳಿಸಿದೆ. ಭಾರತ ಮತ್ತು ಎಚ್‌ಎಎಲ್‌ನೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದ ಸಾಧ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಇ ಏರೋಸ್ಪೇಸ್‌ನ ಸಿಇಒ ಹೆಚ್. ಲಾರೆನ್ಸ್ ಕಲ್ಪ್ ಜೂನಿಯರ್ ಬಣ್ಣಿಸಿದರು.