ನವದೆಹಲಿ:ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರೆದಿರುವ ಬೆನ್ನಲ್ಲೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಭಾರತಕ್ಕೆ ಇಂದು ಭೇಟಿ ನೀಡಲಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಏಪ್ರಿಲ್ 1ರ ತನಕ ಸೆರ್ಗೆ ಲಾವ್ರೋವ್ ಭಾರತದಲ್ಲಿ ಇರಲಿದ್ದು, ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅಮೆರಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಭಾರತಕ್ಕೆ ಭೇಟಿ ನೀಡಿದ್ದಾರೆ.
ಇಬ್ಬರೂ ಅಧಿಕಾರಿಗಳನ್ನು ಭೇಟಿ ಮಾಡಿ ರಷ್ಯಾ - ಉಕ್ರೇನ್ ಯುದ್ಧದ ಸ್ಥಿತಿಗತಿಯ ಬಗ್ಗೆ ಭಾರತದ ನಿಲುವಿನ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಅವರನ್ನು ಸೆರ್ಗೆ ಲಾವ್ರೋವ್ ಭೇಟಿಯಾಗುವ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ. ಭಾರತ ಮತ್ತು ಅಮೆರಿಕ ನಡುವೆ ಏಪ್ರಿಲ್ 11ರಂದು 2+2 ಮಾತುಕತೆ ನಡೆಯಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಾತುಕತೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ರಷ್ಯಾ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.
ಓದಿ:ಈ ದಿನದ ನಿಮ್ಮ ರಾಶಿ-ಭವಿಷ್ಯ ಹೀಗಿದೆ ನೋಡಿ..
ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ವಿಚಾರವಾಗಿ ಭಾರತ ತಟಸ್ಥ ನಿಲುವನ್ನು ಹೊಂದಿದ್ದು, ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದೆ. ಇದರ ಜೊತೆಗೆ ಎರಡೂ ರಾಷ್ಟ್ರಗಳ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ವಿಶ್ವಸಂಸ್ಥೆಯ ನಿಯಮಗಳಿಗೆ ಬದ್ಧರಾಗಿರಬೇಕೆಂದೂ ಕರೆ ನೀಡಿದೆ.
ಇನ್ನು ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆ ಮುಂಚಿತವಾಗಿಅಮೇರಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಬುಧವಾರ ದಲೀಪ್ ಸಿಂಗ್ರನ್ನು ಭೇಟಿ ಮಾಡಿದರು. ಬಳಿಕ ಭಾರತ-ಅಮೆರಿಕ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಇನ್ನಷ್ಟು ಭದ್ರಗೊಳಿಸುವ ಕ್ರಮಗಳ ಕುರಿತು ಚರ್ಚಿಸಿದರು.
ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಮತ್ತು G20 ಶೆರ್ಪಾಗಾಗಿ ಅಮೆರಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತ-ಯುಎಸ್ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಗೋಯಲ್ ಹೇಳಿದರು.
ಓದಿ:ಭಾರತ ತನ್ನ ಪ್ರಭಾವ ಬಳಸಿ, ಯುದ್ಧ ನಿಲ್ಲುವಂತೆ ಮಾಡಲಿ: ಉಕ್ರೇನ್ ಸಚಿವ
ಭಾರತ ಮತ್ತು ಯುಎಸ್ ನಡುವಿನ 2+2 ಮಾತುಕತೆಗೆ ಮುಂಚಿತವಾಗಿ ದಲೀಪ್ ಸಿಂಗ್ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಮತ್ತು ಮುಕ್ತ ಇಂಡೋ - ಪೆಸಿಫಿಕ್ ಅನ್ನು ಉತ್ತೇಜಿಸುವ ಸಹಕಾರವನ್ನು ಭದ್ರಗೊಳಿಸಲು ಸಿಂಗ್ ಭಾರತ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾದ ಅಸಮರ್ಥನೀಯ ಯುದ್ಧದ ಪರಿಣಾಮಗಳ ಬಗ್ಗೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಅದರ ಪರಿಣಾಮ ತಗ್ಗಿಸುವ ಬಗ್ಗೆ ಸಿಂಗ್ ಅವರು ಇಂದು ಸಮಾಲೋಚಿಸುವ ಸಾಧ್ಯತೆ ಇದೆ. ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್ ಮೂಲಕ ಉತ್ತಮ ಗುಣಮಟ್ಟದ ಮೂಲ ಸೌಕರ್ಯ ಉತ್ತೇಜಿಸುವುದು ಮತ್ತು ಇಂಡೋ - ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿ ಸೇರಿದಂತೆ ಬೈಡನ್ ಆಡಳಿತದ ಆದ್ಯತೆಗಳನ್ನು ಸಿಂಗ್ ಅವರು ಭಾರತದ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಮತ್ತು ಅಮೆರಿಕ ಏಪ್ರಿಲ್ 11 ರಂದು ವಾಷಿಂಗ್ಟನ್‌ನಲ್ಲಿ 2+2 ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಸಹವರ್ತಿಗಳಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಜೈಶಂಕರ್ ಮತ್ತು ರಾಜನಾಥ್ ಸಿಂಗ್ ಅವರು ಬದಿಯಲ್ಲಿ ನಿಗದಿತ ಇತರ ಸಭೆಗಳನ್ನು ಸಹ ಹೊಂದಿರುತ್ತಾರೆ.
ಇಂದೇ ಬ್ರಿಟನ್ ಸಚಿವರ ಭಾರತ ಭೇಟಿ:ಇನ್ನು ಇವತ್ತೇ ಬ್ರಿಟನ್ ಸಚಿವರು ಭಾರತಕ್ಕೆ ಭೇಟಿ ನೀಡಲಿದ್ದು, ರಷ್ಯಾ - ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಭಾರತ ರಷ್ಯಾದೊಂದಿಗೆ ಹೊಂದಿರುವ ರಕ್ಷಣಾ ಸಂಬಂಧಿ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.