ಝಾನ್ಸಿ( ಉತ್ತರಪ್ರದೇಶ):ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಯೋವೃದ್ಧ ವಿಜ್ಞಾನಿ ದಂಪತಿಯೊಬ್ಬರ ಮೇಲೆ ಮದ್ಯವ್ಯಸನಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆಯ ನಂತರ ರೈಲು ನಿಲ್ದಾಣದಲ್ಲಿ ಬಹಳ ಸಮಯದವರೆಗೆ ಗದ್ದಲ ಕೂಡಾ ನಡೆಯಿತು. ಗಲಾಟೆಯ ಬಗ್ಗೆ ಮಾಹಿತಿ ಪಡೆದ ಟಿಟಿಇ ಕುಡಿದು ರೈಲು ಹತ್ತಿದ್ದ ಪ್ರಯಾಣಿಕನನ್ನು ಹಿಡಿದು ಝಾನ್ಸಿಯ ಆರ್ಪಿಎಫ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಆರ್ಪಿಎಫ್ ಆರೋಪಿಗೆ ಜಾಮೀನು ನೀಡಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ವಿಜ್ಞಾನಿಯು ಬುಧವಾರ ರಾತ್ರಿ ತಮ್ಮ ಪತ್ನಿಯೊಂದಿಗೆ ಮಧ್ಯಪ್ರದೇಶದ ಹರ್ಪಾಲ್ಪುರದಿಂದ ಹಜರತ್ ನಿಜಾಮುದ್ದೀನ್ಗೆ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಎಸಿ ಕೋಚ್ ಬಿ -3 ರ ಲೋವರ್ ಬೆರ್ತ್ ನ ಸೀಟ್ ಸಂಖ್ಯೆ 57 ಮತ್ತು 60 ರಲ್ಲಿ ಕುಳಿತಿದ್ದರು.
ನವದೆಹಲಿಯ ಕುತುಬ್ ಬಿಹಾರ್ ನೈಋತ್ಯ ದೆಹಲಿಯ ನಿವಾಸಿಯಾದ ರಿತೇಶ್ ಕೂಡ ಅದೇ ಬೋಗಿಯ ಸೈಡ್ ಲೋವರ್ ಬೆರ್ತ್ ಸೀಟ್ ಸಂಖ್ಯೆ 63 ರಲ್ಲಿ ಪ್ರಯಾಣಿಸುತ್ತಿದ್ದ. ಈ ವ್ಯಕ್ತಿ ಕುಡಿದು ರೈಲು ಹತ್ತಿದ್ದ ಎಂದು ಆರೋಪಿಸಲಾಗಿದೆ. ಈತ ಮಾಣಿಕ್ ಪುರದಲ್ಲಿ ಬುಧವಾರ ರಾತ್ರಿ 9:51 ರ ಸುಮಾರಿಗೆ ತನ್ನ ಸೀಟಿನಿಂದ ವೃದ್ಧ ದಂಪತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ವೃದ್ಧ ದಂಪತಿ ಪ್ರತಿಭಟಿಸಿದ್ದಾರೆ. ಈ ಸಮಯದಲ್ಲಿ ಯುವಕ ತಿರುಗಿ ದಂಪತಿಯನ್ನೇ ನಿಂದಿಸಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ.