ನವದೆಹಲಿ: ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಆರಂಭದ ದಿನ ನೂತನ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನೂತನ ಸಚಿವರನ್ನು ಸಂಸತ್ಗೆ ಪರಿಚಯಿಸಿಕೊಟ್ಟ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಭೆಯನ್ನುದ್ದೇಶಿ ಮಾತನಾಡಿದರು. ಈ ವೇಳೆ ವಿಪಕ್ಷಗಳು ಘೋಷಣೆ ಕೂಗಿ ಕೆಲಕಾಲ ಗದ್ದಲ ಎಬ್ಬಿಸಿದವು. ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಕೋಲಾಹಲವಾದ್ದರಿಂದ ಕಲಾಪಗಳೆರಡನ್ನೂ ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಅಧಿವೇಶನದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಪಕ್ಷಗಳು ಸರ್ಕಾರಕ್ಕೆ ತೀಕ್ಷ್ಣವಾದ, ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕು. ಇಡೀ ಜಗತ್ತು ಕೋವಿಡ್ನಿಂದ ತತ್ತರಿಸಿರುವ ಸಂದರ್ಭದಲ್ಲಿ ಅಧಿವೇಶನದ ಸಮಯವನ್ನು ಹಾಳು ಮಾಡುಬಾರದು. ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಹೇಳಿದರು.