ಸತಾರ್(ಮಹಾರಾಷ್ಟ್ರ):ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021ರ ನಾಗರಿಕ ಸೇವೆ ಪರೀಕ್ಷೆಯ ಅಂತಿಮ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಸಲವೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಇದರ ಮಧ್ಯೆ ಮಹಾರಾಷ್ಟ್ರದ ರೈತನ ಮಗನೋರ್ವ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, 194ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಸತಾರದ ಜವಳಿ ತಾಲೂಕಿನ ಸಂಪಣೆ ಗ್ರಾಮದ ಓಂಕಾರ್ ಪವಾರ್ ಈ ಸಾಧನೆ ಮಾಡಿದ ಯುವಕನಾಗಿದ್ದಾನೆ. 2015ರಲ್ಲಿ ಇಂಜಿನಿಯರಿಂಗ್ ಪದವಿ ಪಾಸ್ ಮಾಡಿದಾಗಿನಿಂದಲೂ ಓಂಕಾರ್ ಪರೀಕ್ಷೆ ಬರೆಯುತ್ತಿದ್ದು, ಒಟ್ಟು ಮೂರು ಸಲ ತೇರ್ಗಡೆಯಾಗಿದ್ದಾರೆ.
ಯುಪಿಎಸ್ಸಿಯಲ್ಲಿ ರೈತನ ಮಗನ ಅದ್ಭುತ ಸಾಧನೆ 2018ರಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ಸಹಾಯಕ ಕಮಾಂಡರ್ ಆಗಿ ಆಯ್ಕೆಯಾಗಿದ್ದ ಓಂಕಾರ್, 2020ರಲ್ಲಿ ಐಪಿಎಸ್ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಈ ಸಲ ಐಎಎಸ್ ಹುದ್ದೆ ಪಡೆದುಕೊಳ್ಳುವ ಭರವಸೆ ಇದೆ ಎಂದು ತಿಳಿಸಿದ್ದಾರೆ. ಈ ಹಿಂದಿನ ಪರೀಕ್ಷೆಗಳಲ್ಲಿ ಕಡಿಮೆ ಶ್ರೇಯಾಂಕ ಪಡೆದುಕೊಂಡಿದ್ದೆ. ಆದರೆ, ಇದೀಗ ಉತ್ತಮ ರ‍್ಯಾಂಕ್ ಪಡೆದುಕೊಂಡಿದ್ದು, ಐಎಎಸ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕಷ್ಟದ ದಿನಗಳಲ್ಲೂ ಸ್ಥಿರತೆ, ನಮ್ಮ ಗುರಿ ಬಗ್ಗೆ ಸ್ಪಷ್ಟತೆ ಮುಖ್ಯ ಎಂದ UPSC ಟಾಪರ್ ಅಂಕಿತಾ!
ಮನೆಯಲ್ಲೇ ಅಧ್ಯಯನ:ಯುಪಿಎಸ್ಸಿಗೋಸ್ಕರ ಯಾವುದೇ ರೀತಿಯ ತರಬೇತಿ ಪಡೆದುಕೊಳ್ಳದೇ ಮನೆಯಲ್ಲೇ ಅಧ್ಯಯನ ಮಾಡಿರುವುದಾಗಿ ಓಂಕಾರ್ ಹೇಳಿಕೊಂಡಿದ್ದಾರೆ. ಕಳೆದ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಗಮನ ಹರಿಸದ ವಿಷಯಗಳ ಮೇಲೆ ಹೆಚ್ಚಿನ ಒತ್ತು ನೀಡಿದ್ದು,ಅದರ ಪರಿಣಾಮವಾಗಿ ಉತ್ತಮ ಸ್ಥಾನ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಂಬಿಕೆ ಮತ್ತು ಸಾಮರ್ಥ್ಯದ ಮೇಲೆ ಭರವಸೆ:ನಾವೂ ಯಾವ ಊರಿನವರು, ಮನೆಯ ಪರಿಸ್ಥಿತಿ ಯಾವ ರೀತಿಯಾಗಿದೆ ಎಂಬುದರ ಬಗ್ಗೆ ಚಿಂತಿಸಬೇಕಾಗಿಲ್ಲ. ನಮ್ಮಲ್ಲಿ ನಂಬಿಕೆ ಮತ್ತು ಸಾಮರ್ಥ್ಯದ ಮೇಲೆ ಭರವಸೆ ಇರಲಿ. ನಮ್ಮ ಸಾಮರ್ಥ್ಯದ ಬಗ್ಗೆ ಯಾವತ್ತೂ ಅನುಮಾನಿಸಬಾರದು ಎಂದಿದ್ದಾರೆ.
ವೈಯಕ್ತಿನ ಜೀವನದ ಮಧ್ಯೆ ಎಲ್ಲ ವಿಷಯ, ಕ್ಷೇತ್ರಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಆದರೆ, ಅದಕ್ಕಾಗಿ ಸಮಯ ನಿಗದಿಪಡಿಸಿಕೊಳ್ಳಬೇಕು. ವಿಶೇಷವಾಗಿ ವೇಳಾಪಟ್ಟಿ ಯೋಜಿಸಿ, ಅಧ್ಯಯನ ಮಾಡುವುದು ಅತಿ ಉತ್ತಮ ಎಂದರು. ಓಂಕಾರ್ ಸತಾರ್ದ ಸಂಪಣೆಯಲ್ಲಿ ಆರಂಭಿಕ ಶಿಕ್ಷಣ ಪಡೆದುಕೊಂಡಿದ್ದು, ತದನಂತರ ಪ್ರೌಢ ಶಿಕ್ಷಣವನ್ನ ರಾಯತ್ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ತದನಂತರದ ಶಿಕ್ಷಣ ಪುಣೆಯಲ್ಲಿ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಯುಪಿಎಸ್ಸಿಯಲ್ಲಿ 455ನೇ ಸ್ಥಾನ ಪಡೆದುಕೊಂಡಿದ್ದ ಇವರು ಐಪಿಎಸ್ ಸ್ಥಾನ ಪಡೆದುಕೊಂಡಿದ್ದರು.
ಓಂಕಾರ್ ಕುಟುಂಬ ಬಡತನದಿಂದ ಕೂಡಿದ್ದು, ತಂದೆ ಕೃಷಿಕರಾಗಿದ್ದಾರೆ. ಇದೀಗ ಹೆಚ್ಚಿನ ಸ್ಥಾನ ಪಡೆದುಕೊಂಡು ಪಾಸ್ ಆಗಿರುವ ಕಾರಣ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.