ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 'ರಾಮ ಮಂದಿರ ಸ್ತಬ್ಧಚಿತ್ರ'ಕ್ಕೆ ಪ್ರಥಮ ಬಹುಮಾನ ಒಲಿದುಬಂದಿದೆ.
ಹೌದು.. ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಎಲ್ಲಾ ರಾಜ್ಯಗಳ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವಂತಹ ಸ್ತಬ್ಧಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿದ್ದವು.
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಮ ಮಂದಿರ ಸ್ತಬ್ಧಚಿತ್ರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮುಂದೆ ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಕುಳಿತಿರುವ ಟ್ಯಾಬ್ಲೋ ದೇಶದ ಜನತೆಯ ಗಮನ ಸೆಳೆದಿತ್ತು. ಜನರು ಜೈ ಶ್ರೀರಾಮ್ ಘೋಷಣೆ ಕೂಗಿ, ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಇದೀಗ ರಾಮ ಮಂದಿರ ಮಾದರಿ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ನೀಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಮಾಹಿತಿ ನಿರ್ದೇಶಕ ಶಿಶಿರ್ ಸಿಂಗ್, ಇಡೀ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಗುರುವಾರ ದೆಹಲಿಯಲ್ಲಿ ರಕ್ಷಣಾ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.