ಪಲಮು (ಜಾರ್ಖಂಡ್):ಜಾರ್ಖಂಡ್ ವಿಶೇಷ ಕಾರ್ಯಪಡೆ ಯೋಧರೊಬ್ಬರ ಆತ್ಮಹತ್ಯೆ ಪ್ರಕರಣ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಪಲಮು ಜಿಲ್ಲೆಯ ಲೆಸ್ಲಿಗಂಜ್‌ನಲ್ಲಿರುವ ಝಾಪ್ 8 ಕಾರ್ಪ್ಸ್ ಮುಖ್ಯ ಕಚೇರಿ ಆವರಣದಲ್ಲಿ ಅನೀಶ್ ವರ್ಮಾ ಎಂಬ ಯೋಧ ಸಾವಿಗೆ ಶರಣಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಇತರ ಸೈನಿಕರು ಅಧಿಕಾರಿಗಳ ಮೇಲೆ ದಾಳಿ ಮಾಡಿ ಥಳಿಸಿದ್ದಾರೆ.
2013ರಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ (ಆರ್ಐಬಿ)ಯ ಸೈನಿಕರಾಗಿ ಅನೀಶ್ ವರ್ಮಾ ನೇಮಕಗೊಂಡಿದ್ದರು. 2015ರಲ್ಲಿ ಜಾರ್ಖಂಡ್ ಜಾಗ್ವಾರ್ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಸದ್ಯ ಲೆಸ್ಲಿಗಂಜ್‌ನಲ್ಲಿ ಜನವರಿಯಿಂದ ಎಸ್ಪಿಸಿ (Senior Promotion Course) ತರಬೇತಿ ನಡೆಯುತ್ತಿದೆ. ಈ ಸಮಯದಲ್ಲಿ ಅವರನ್ನು ಮೆಸ್ ಉಸ್ತುವಾರಿಯನ್ನಾಗಿ ಮಾಡಲಾಯಿತು. ಪ್ರತಿ ದಿನ ಬೆಳಗ್ಗೆ 5.30ಕ್ಕೆ ತರಬೇತಿ ಆರಂಭವಾಗಿತ್ತು. ಇತರ ಯೋಧರು ತರಬೇತಿಗಾಗಿ ಹೋಗಿದ್ದರು. ಈ ವೇಳೆ, ಅನೀಶ್ ತನ್ನ ಟೆಂಟ್‌ನಲ್ಲೇ ಉಳಿದುಕೊಂಡಿದ್ದರು. ಈ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಡಿಎಸ್‌ಪಿ ವಿರುದ್ಧ ಕಿರುಕುಳ ಆರೋಪ: ಅನೀಶ್ ವರ್ಮಾ ಸಾವಿನ ಬೆನ್ನಲ್ಲೇ ಸಹೋದ್ಯೋಗಿ ಯೋಧರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಯ ಕಿರುಕುಳ ಮತ್ತು ಹಲ್ಲೆಯಿಂದ ಅನೀಶ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಯೋಧರು ಪ್ರತಿಭಟನೆ ನಡೆಸಿದ್ದು, ಮೇಲಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪಲಾಮು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಝಾಪ್ 8 ಕಾರ್ಪ್ಸ್ ಪ್ರಭಾರಿ ಕಮಾಂಡೆಂಟ್ ಚಂದನ್ ಕುಮಾರ್ ಸಿನ್ಹಾ ಸ್ಥಳಕ್ಕೆ ದೌಡಾಯಿಸಿದ್ದಾರೆ.