ನವದೆಹಲಿ: ಎಸ್‌ಎಸ್‌ಸಿ ನೇಮಕಾತಿ ಹಗರಣದಲ್ಲಿ ರಾಜ್ಯದ ರಾಜ್ಯ ಸಚಿವ ಪಾರ್ಥ ಚಟರ್ಜಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು.
ಆಡಳಿತ ಪಕ್ಷ ಮಾತ್ರವಲ್ಲದೇ ಪ್ರತಿಪಕ್ಷಗಳ ಸಂಸದರು ಸಹ ಸಂಸತ್ತಿನಲ್ಲಿ ಪ್ರತಿಭಟನೆಗಿಳಿದರು. ಸೋಮವಾರ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಉಭಯ ಸದನಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.
ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಹಣದುಬ್ಬರ ಚರ್ಚೆಯ ವಿಷಯವನ್ನು ಪಟ್ಟಿ ಮಾಡಿದೆ. ಎರಡು ವಾರಗಳ ಕಾವೇರಿದ ಕಲಾಪದ ನಂತರ, ಇಂದು ಬೆಲೆ ಏರಿಕೆಯ ಚರ್ಚೆಯನ್ನು ಲೋಕಸಭೆಯಲ್ಲಿ ತರಲು ಉದ್ದೇಶಿಸಲಾಗಿರುವುದರಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟ ಕಾಣಲಿದೆ. ಈ ಚರ್ಚೆ ರಾಜ್ಯಸಭೆಯಲ್ಲಿ ಮಂಗಳವಾರ ನಡೆಯಲಿದೆ.
ಸಂಜಯ್ ರಾವುತ್ ಬಂಧನ, ಬೆಲೆ ಏರಿಕೆ, ಗುಜರಾತ್ ಕಳ್ಳಬಟ್ಟಿ ದುರಂತ ಮತ್ತು ಜಾರ್ಖಂಡ್‌ನಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನಗಳಂಥ ಹಲವಾರು ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ.
ಹಲವು ವಿಧೇಯಕಗಳ ಮಂಡನೆ ಸಾಧ್ಯತೆ:ಏತನ್ಮಧ್ಯೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರಕ್ಕೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ, 2022 ಅನ್ನು ರಾಜ್ಯಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಣದುಬ್ಬರ, ಗುಜರಾತ್ ಕಳ್ಳಬಟ್ಟಿ ದುರಂತ ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿ ನಡೆಸಿದ 'ಆಪರೇಷನ್ ಕೀಚಡ್' ವಿಷಯವನ್ನು ಪಕ್ಷವು ಪ್ರಸ್ತಾಪಿಸಲಿದೆ. ಆಡಳಿತ ಪಕ್ಷವು ವಿರೋಧಪಕ್ಷ ಮುಕ್ತ ಸಂಸತ್ತನ್ನು ಬಯಸುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನು ಓದಿ:'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ