ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡು, ಶುಕ್ರವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಎರಡನೇ ಬಾರಿಗೆ ಯೋಗಿ ಪರ್ವ ಶುರುವಾಗಿದೆ. ಯೋಗಿ ನೇತೃತ್ವದ 2.0 ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಒಟ್ಟು 24 ಹಾಲಿ ಸಚಿವರಿಗೆ ಕೊಕ್ ನೀಡಲಾಗಿದೆ.
ನಿನ್ನೆ ಹೊಸದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ 52 ಸದಸ್ಯರ ಪೈಕಿ 33 ಹೊಸಬರಿದ್ದಾರೆ. ಭಾರತೀಯ ಜನತಾ ಪಕ್ಷ ಜಾತಿ ಸಮೀಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಿ ಸಂಪುಟ ರಚಿಸಿದೆ. ಹೊಸ ತಂಡದಲ್ಲಿ 21 ಮೇಲ್ಜಾತಿ ಶಾಸಕರಿಗೆ ಸ್ಥಾನ ನೀಡಲಾಗಿದೆ. 9 ದಲಿತರು ಸಂಪುಟದಲ್ಲಿದ್ದಾರೆ. ಬೇಬಿರಾಣಿ ಮೌರ್ಯ ಅವರಿಗೂ ಸಂಪುಟದಲ್ಲಿ ಸ್ಥಾನ ಒದಗಿಸಲಾಗಿದೆ.
ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಕೊಡುವ ಮೂಲಕ ರಾಜ್ಯದ ದಲಿತರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ. ಠಾಕೂರ್ ಮತ್ತು ಬ್ರಾಹ್ಮಣ ಸಮುದಾಯದ ಜೊತೆಗೆ ಜಾಟ್ ಮತ್ತು ಭೂಮಿಹಾರ್ ಸಮುದಾಯಕ್ಕೂ ಮಣೆ ಹಾಕಿದೆ. ಶುಕ್ರವಾರದಂದು ರಾಜ್ಯಪಾಲ ಆನಂದಿಬೆನ್ ಅವರು 18 ಕ್ಯಾಬಿನೆಟ್ ದರ್ಜೆಯ ಸಚಿವರು, 14 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 20 ರಾಜ್ಯ ಸಚಿವರಿಗೆ ಶುಕ್ರವಾರ ಪ್ರಮಾಣ ವಚನ ಬೋಧಿಸಿದರು. ಮೇಲ್ವರ್ಗದವರ ಜೊತೆಗೆ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ, ಅಲ್ಲದೇ ಮುಸ್ಲಿಮರು ಮತ್ತು ಸಿಖ್ಖರಿಗೂ ಸಂಪುಟದಲ್ಲಿ ಸಚಿವ ಸಂಪುಟದಲ್ಲಿ ಸಿಎಂ ಯೋಗಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ದಕ್ಷಿಣ ಕಾಶ್ಮೀರದ ತ್ರಾಲ್‌ನಲ್ಲಿ ಉಗ್ರರ ಅಡಗುತಾಣ ಪತ್ತೆ ಹಚ್ಚಿದ ಭದ್ರತಾ ಪಡೆಗಳು
ಜಾತಿ ಸಮೀಕರಣ ನೋಡುವುದಾದರೆ, 21 ಮಂದಿ ಮೇಲ್ಜಾತಿ ನಾಯಕರು (7 ಮಂದಿ ಬ್ರಾಹ್ಮಣರು), 20 ಒಬಿಸಿ ಮಂದಿ, ದಲಿತ ಸಮುದಾಯದ 9 ಮಂದಿ ಮಂದಿಯನ್ನು ಸಚಿವರನ್ನಾಗಿ ಮಾಡಲಾಗಿದೆ. ಮುಸ್ಲಿಂ, ಸಿಖ್, ಪಂಜಾಬಿ, ಯಾದವ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಗಿದೆ. ಇನ್ನೂ ಕೇಶವ್ ಪ್ರಸಾದ್ ಮೌರ್ಯ(ಒಬಿಸಿ) ಅವರು ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರವೂ ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಸಭೆ: ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಯೋಗಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ರಾಜ್ಯದ ಅಭಿವೃದ್ಧಿ, ಮುಂದಿನ ಯೋಜನೆಗಳು ಮತ್ತು ಪಕ್ಷ ಸಂಘಟನೆ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಗಿತ್ತು. ಎರಡನೇ ದಿನವಾದ ಇಂದು ಸಿಎಂ ಯೋಗಿ ಆದಿತ್ಯನಾಥ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಭಾಷಣ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾರ್ವಜನಿಕ ಸೇವೆಗಿಂತ ಪುಣ್ಯ ಮತ್ತೊಂದಿಲ್ಲ. ಬದ್ಧತೆ ಮತ್ತು ನಿಷ್ಠೆಯೊಂದಿಗೆ ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ಆಧ್ಯಾತ್ಮಿಕ ತೃಪ್ತಿ ಸಿಗುತ್ತದೆ. ಮಂತ್ರಿಗಳಿಗೆ ಜನರು ಮತ್ತು ರಾಜ್ಯದ ಸೇವೆ ಮಾಡುವ ಪವಿತ್ರ ಅವಕಾಶ ಸಿಕ್ಕಿದೆ.
ಈ ಅವಕಾಶವನ್ನು ಸಾಧನೆಯಾಗಿ ಪರಿವರ್ತಿಸಿ, ರಾಜ್ಯದ ಅಭಿವೃದ್ಧಿ ಮತ್ತು ಜನರ ಸಂತೋಷಕ್ಕಾಗಿ ನಾವೆಲ್ಲರೂ ನಿರಂತರ ಪ್ರಯತ್ನಗಳನ್ನು ಮಾಡಬೇಕಾಗಿದೆ. ಪ್ರಮುಖವಾಗಿ, ರಾಷ್ಟ್ರೀಯತೆ, ಭದ್ರತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಜೊತೆಗೆ ರಾಜ್ಯದ ಪ್ರಗತಿ ಹಾಗೂ ಅಭ್ಯುದಯಕ್ಕೆ ಕಾರಣರಾದ ಹಿಂದಿನ ರಾಜ್ಯ ಸರ್ಕಾರದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿ ಕೆಲಸದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ ಎಂದು ಹೇಳಿದರು. ಕಾಮಗಾರಿಗಳು ನೀತಿ, ನಿಯಮಗಳ ಪ್ರಕಾರ ನಡೆಯಬೇಕು, ಕಾಮಗಾರಿಗಳನ್ನು ಚುರುಕಿನಿಂದ ಶೀಘ್ರ ಮುಗಿಸಬೇಕು ಎಂದು ಒತ್ತಿ ಹೇಳಿದರು. ಕಡತಗಳ ವಿಲೇವಾರಿಗೆ ಕಾಲಮಿತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದರು. ಯಾವುದೇ ಸಂದರ್ಭದಲ್ಲೂ ಕಡತಗಳು ಬಾಕಿ ಉಳಿಯಬಾರದು ಎಂದರು.
ಸಚಿವರಿಗೆ ಯೋಗಿ ಖಡಕ್ ಸೂಚನೆ:ಸಚಿವರು ತಮ್ಮ ಕಚೇರಿಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಜನಪ್ರತಿನಿಧಿಗಳು, ಸಚಿವರು ಸಾರ್ವಜನಿಕರೊಂದಿಗೆ ಪರಿಣಾಮಕಾರಿ ಸಂಪರ್ಕ ಸಾಧಿಸಿ ಸಂವಾದ ನಡೆಸಬೇಕು. ಸಾರ್ವಜನಿಕ ಕುಂದುಕೊರತೆಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ನಿಯಮಿತವಾಗಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸಬೇಕು. ಸರ್ಕಾರದ ಪ್ರತಿನಿಧಿಯಾಗಿರುವ ಸಚಿವರ ಕೆಲಸ, ನಡತೆ, ನಡತೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಹಾಗಾಗಿ ಸರಳತೆ ಮತ್ತು ಪರಿಶುದ್ಧತೆಯಿಂದ ಕೆಲಸ ನಡೆಯಬೇಕು. ಮಂತ್ರಿಗಳ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ಕರ್ತವ್ಯಗಳು ಮತ್ತು ಕೆಲಸಗಳಲ್ಲಿ ಕುಟುಂಬವು ಯಾವುದೇ ಹಂತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.