ಚೆನ್ನೈ (ತಮಿಳುನಾಡು) :ಶಾಲೆಯಿಂದ ವಾಪಸಾಗುತ್ತಿದ್ದ ಒಂಬತ್ತು ವರ್ಷದ ಬಾಲಕಿಯೊಬ್ಬಳ ಮೇಲೆ ಹಸುಗಳು ಮನಬಂದಂತೆ ದಾಳಿ ಮಾಡಿವೆ. ದಾಳಿ ಮಾಡಿರುವ ವಿಡಿಯೋ ಭಯಾನಕವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಚೆನ್ನೈನ ಎಂಎಂಡಿಎ ಕಾಲೋನಿಯ ಅರುಂಬಕ್ಕಂನಲ್ಲಿ ಬುಧವಾರ ನಡೆದಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.
ಚೂಲೈಮೇಡು ನಿವಾಸಿ ಜಾಫರ್ ಸಿದ್ದಿಕ್ ಅಲಿ ಮತ್ತು ಹರ್ಸಿನ್ ಬಾನು ದಂಪತಿಯ ಪುತ್ರಿ ಆಯೇಷಾ ಗಾಯಗೊಂಡ ಬಾಲಕಿ. ತಾಯಿ ಹರ್ಸಿನ್ ಬಾನು ತನ್ನ ಮಕ್ಕಳಾದ ಆಯೇಷಾ ಹಾಗೂ ಉಮ್ಮರ್ನನ್ನು ಎಂದಿನಂತೆ ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು. ಎಂಎಂಡಿಎ ಕಾಲೋನಿಯಲ್ಲಿ ಮೂವರು ತಮ್ಮಷ್ಟಕ್ಕೆ ತಾವು ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಹಸುಗಳು ಮಕ್ಕಳ ಮೇಲೆ ದಾಳಿ ಮಾಡಿವೆ. ದಾಳಿ ವೇಳೆ ಒಟ್ಟು ಏಳು ಹಸುಗಳಿದ್ದು, ಒಂದು ಹಸು ಮಾತ್ರ ಮನಬಂದಂತೆ ದಾಳಿ ಮಾಡಿದೆ.
ಪುತ್ರ ಉಮ್ಮರ್ ಹಸುಗಳ ದಾಳಿಯಿಂದ ಪಾರಾದರೆ, ಪುತ್ರಿ ಆಯೇಷಾಳನ್ನು ಹಸುವೊಂದು ತನ್ನ ಕೊಂಬುಗಳಿಂದ ಎತ್ತಿ ರಸ್ತೆಯ ಬದಿಗೆ ಎಸೆದಿದೆ. ತಾಯಿ ಸೇರಿದಂತೆ ಸ್ಥಳದಲ್ಲಿದ್ದವರೆಲ್ಲ ಎಷ್ಟೇ ಬೆದರಿಸಿ ಓಡಿಸಿದರೂ ಪುನಃ ಬಂದ ಹಸು, ತನ್ನೆಲ್ಲ ಶಕ್ತಿ ಪ್ರಯೋಗಿಸಿ ಕೊಂಬಿನಿಂದ ಬಾಲಕಿಯನ್ನು ಮತ್ತೆ ನೆಲಕ್ಕೆ ಹಾಕಿ ಗುದ್ದಿದೆ. ಬಾಲಕಿಯ ಚೀರಾಟ ಕೇಳಿ ಓಡಿ ಬಂದ ಮತ್ತಷ್ಟು ಜನ, ಹಸುಗಳಿಗೆ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದು ಓಡಿಸಿದ್ದಾರೆ. ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅರುಂಬಕ್ಕಂ ಪೊಲೀಸರು ಹಸುಗಳ ಮಾಲೀಕ ವಿವೇಕ್ (ವಯಸ್ಸು 29) ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿ ತನಿಖೆ ನಡೆಸುತ್ತಿದ್ದಾರೆ.