ಉತ್ತರಕಾಶಿ (ಉತ್ತರಾಖಂಡ):ದುರಸ್ತಿಗೊಂಡಿದ್ದಅಗರ್ ಯಂತ್ರದಲ್ಲಿ ಇದೀಗ ಮತ್ತೊಮ್ಮೆ ತಾಂತ್ರಿಕ ದೋಷ ಎದುರಾಗಿದ್ದು, ಡ್ರಿಲ್ಲಿಂಗ್ ಅನ್ನು ಸ್ಥಗಿತಗೊಳಿಸಿ, ಯಂತ್ರವನ್ನು ಹೊರತರಲಾಗುತ್ತಿದೆ. ಗುರುವಾರ ರಾತ್ರಿ ತಾಂತ್ರಿಕ ದೋಷ ಕಾಣಿಸಿಕೊಂಡು ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ತಂಡ ತಯಾರಿ ಮಾಡಿಕೊಂಡಿತ್ತು. ಆದರೆ ಡ್ರಿಲ್ಲಿಂಗ್ ಪ್ರಾರಂಭಿಸುವ ಹೊತ್ತಿಗೆ ಮತ್ತೆ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಇನ್ನೆರಡು ಗಂಟೆಗಳಲ್ಲಿ ಉಳಿದ ಎರಡು ಪೈಪ್ಗಳನ್ನು ಸುರಂಗದೊಳಗೆ ಅಳವಡಿಸಲಾಗುವುದು. ಕೊಳವೆಗಳನ್ನು ಬೆಸುಗೆ ಹಾಕುವ ಕೆಲಸ ನಡೆಯುತ್ತಿದ್ದು, ಇದು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳಲಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಡ್ರಿಲ್ಲಿಂಗ್ ಯಂತ್ರವೂ ದುರಸ್ತಿಗೊಂಡಿದೆ. ಮುಂದೆ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂದು ರಸ್ತೆ ಹಾಗೂ ಸಾರಿಗೆ ಹೆಚ್ಚುವರಿ ತಾಂತ್ರಿಕ ಕಾರ್ಯದರ್ಶಿ ಮಹಮ್ಮದ್ ಅಹ್ಮದ್ ಭರವಸೆ ವ್ಯಕ್ತಪಡಿಸಿದ್ದರು.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಒಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 13 ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಸಂಜೆ ವೇಳೆಗೆ ಒಳಗೆ ಸಿಲುಕಿರುವ ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಗುರುವಾರ ರಾತ್ರಿ ಇನ್ನೇನು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳಬೇಕಿದ್ದ ಸಮಯಕ್ಕೆ ಡ್ರಿಲ್ಲಿಂಗ್ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದ ಕಾರಣ ಕಾರ್ಯಾಚರಣೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.
ಸುಮಾರು 48 ಮೀಟರ್ ಭಾಗದಲ್ಲಿ ಪೈಪ್ಗಳು ಒಳಗೆ ಹೋಗಿದ್ದು, ಇನ್ನು 12 ಮೀಟರ್ನಷ್ಟು ಭಾಗ ಹೋಗಬೇಕಿದೆ. ಆದರೆ ಈ 12 ಮೀಟರ್ ಭಾಗ ಸಾಕಷ್ಟು ಸವಾಲಾಗಿದೆ. ಗುರುವಾರ ಕಾರ್ಯಾಚರಣೆ ವೇಳೆ ಡ್ರಿಲ್ಲಿಂಗ್ ಯಂತ್ರ ಈ ಭಾಗಕ್ಕೆ ತಲುಪುವ ವೇಳೆಗೆ ಕಬ್ಬಿಣ ಸರಳುಗಳು ಸಿಕ್ಕಿ, ಅವುಗಳನ್ನು ಕತ್ತರಿಸುವ ವೇಳೆ ಅಗರ್ ಯಂತ್ರ ಕೆಟ್ಟು ಹೋಗಿತ್ತು. ನಂತರ ದೆಹಲಿಯಿಂದ ತಂತ್ರಜ್ಞರನ್ನು ಕರೆಸಿ, ಯಂತ್ರದ ದುರಸ್ತಿ ಕೆಲಸ ಮಾಡಿಸಲಾಗಿದೆ. ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಲಿದೆ ಎಂದು ಮಹಮ್ಮದ್ ಅಹ್ಮದ್ ತಿಳಿಸಿದ್ದರು.