ಕೌಶಾಂಬಿ (ಉತ್ತರ ಪ್ರದೇಶ): ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಜನತೆ ದೇವರ ಮೊರೆ ಹೋಗುತ್ತಾರೆ. ಹಲವು ಸಂದರ್ಭದಲ್ಲಿ ತಾವು ಅಂದುಕೊಂಡಿದ್ದ ನೆರವೇರಿದ ಕಾರಣ ದೇವರಿಗೆ ಹರಕೆಯನ್ನೂ ಜನರು ತೀರಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆಯಾಗುವ ಆಸೆ ಈಡೇರಲಿಲ್ಲ ಎಂಬ ಕೋಪದಲ್ಲಿ ದೇವರ ಶಿವಲಿಂಗವನ್ನೇ ಕದ್ದು ಹೊಲದಲ್ಲಿ ಬಚ್ಚಿಟ್ಟಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಮಹೇವ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, 27 ವರ್ಷದ ಯುವಕ ಕುಮ್ಹಿಯಾವಾಹ ಬಜಾರ್‌ನಲ್ಲಿರುವ ಭೈರೋ ಬಾಬಾ ದೇವಸ್ಥಾನಲ್ಲಿನ ಶಿವಲಿಂಗ ಕಳ್ಳತನ ಮಾಡಿದ್ದಾನೆ. ಇತರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಶಿವಲಿಂಗ ಕಂಡು ಬಂದಿಲ್ಲ. ಇದರಿಂದ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರಿಗೆ ಭಕ್ತರು ವಿಷಯ ಮುಟ್ಟಿಸಿದ್ದಾರೆ. ಅಲ್ಲದೇ, ಇದೇ ವಿಷಯವಾಗಿ ಗ್ರಾಮದ ಮುಖಂಡ ಓಂಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ, ಭಾನುವಾರ ಕುಮ್ಹಿಯಾವಾಹ ಗ್ರಾಮದಲ್ಲೇ ಛೋಟು ಎಂಬ ಯುವಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿ ಛೋಟು ಶಿವಲಿಂಗ ಕದ್ದ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಶಿವಲಿಂಗವನ್ನು ಹೊಲವೊಂದರಲ್ಲಿ ಎಲೆಗಳು ಮತ್ತು ಬಿದಿರುಗಳ ರಾಶಿಯ ಅಡಿ ಮರೆಮಾಚಲಾಗಿತ್ತು ಎಂದು ಮಹೇವ ಘಾಟ್ ಪೊಲೀಸ್ ಠಾಣಾಧಿಕಾರಿ ರಜನಿಕಾಂತ್ ಹೇಳಿದ್ದಾರೆ.
ಸದ್ಯ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 379ರ ಅಡಿ ಕಳ್ಳತನದ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ. ಶ್ರಾವಣ ಮಾಸದಲ್ಲಿ ಮನಃಪೂರ್ವಕವಾಗಿ ಈ ಯುವಕ ದೇವರಿಗೆ ಪ್ರಾರ್ಥಿಸುತ್ತಿದ್ದ. ಅಲ್ಲದೇ, ಉಪವಾಸ ವ್ರತ ಕೂಡ ಮಾಡುತ್ತಿದ್ದ. ಆದರೂ ತನ್ನ ಮದುವೆಯ ಆಸೆಯನ್ನು ಈಡೇರದ ಕಾರಣ ಶಿವದೇವನ ಬಗ್ಗೆ ಅಸಮಾಧಾನಗೊಂಡಿದ್ದ ಎಂದು ಹೇಳಲಾಗಿದೆ. (ಐಎಎನ್ಎಸ್)