ಬಿಜ್ನೋರ್(ಉತ್ತರ ಪ್ರದೇಶ): ತನ್ನ ಗಂಡನ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಕತ್ತು ಹಿಸುಕಿ ಕೊಂದು ಹಾಕಿದ ಅಮಾನವೀಯ ಘಟನೆ ಬಿಜ್ನೋರ್ ಜಿಲ್ಲೆಯ ಔರಂಗಪುರದ ಭಿಕ್ಕು ಗ್ರಾಮದಲ್ಲಿ ನಡೆದಿದೆ. ಮಗುವಿನ ತಂದೆ ಅಂಕಿತ್ ಸಿಂಗ್ ಶನಿವಾರ ತಮ್ಮ ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅನುಮಾನದ ಆಧಾರದ ಮೇಲೆ ಮಗುವಿನ ತಾಯಿ ಶಿವಾನಿ ರಾಣಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ಪತಿಯೊಂದಿಗೆ ತೀವ್ರ ವಾಗ್ವಾದದ ನಂತರ ಕೋಪದ ಭರದಲ್ಲಿ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಸಂಗತಿಯನ್ನು ಆಕೆ ಒಪ್ಪಿಕೊಂಡಿದ್ದಾಳೆ.