ಬರೇಲಿ (ಉತ್ತರ ಪ್ರದೇಶ): ಅಮಾನವೀಯವಾಗಿ 10 ವರ್ಷದ ಮಗುವನ್ನು ಕೊಂದು ರಕ್ತ ಕುಡಿದ 33 ವರ್ಷದ ಮಹಿಳೆಗೆ ಬರೇಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಧನ್ ದೇವಿ ಶಿಕ್ಷೆಗೆ ಒಳಗಾದ ಮಹಿಳೆ. ಈಕೆ ತನ್ನ ಸ್ನೇಹಿತ ಸೂರಜ್ ಮತ್ತು ಸೋದರ ಸಂಬಂಧಿ ಸುನೀಲ್ ಕುಮಾರ್ ಸಹಾಯ ಪಡೆದು ಅಕ್ಕಪಕ್ಕದ ಮನೆಯವರ ಗಂಡು ಮಗುವನ್ನು ಅಪಹರಿಸಿ ಕೊಂದಿದ್ದಾಳೆ. ಈಕೆಗೆ ಮಕ್ಕಳಿರಲಿಲ್ಲ, ಮಗುವನ್ನು ಕೊಂದು ರಕ್ತ ಕುಡಿದರೆ ಗರ್ಭಧರಿಸುತ್ತೇನೆಂಬ ಭ್ರಮೆಯಲ್ಲಿ ಹೀಗೆ ಮಾಡಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ.
ಕೃತ್ಯಕ್ಕೆ ಸಹಾಯ ಮಾಡಿದ ಮಹಿಳೆಯ ಪರಮಾಪ್ತ ಮತ್ತು ಆಕೆಯ ಸೋದರಸಂಬಂಧಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಕಾ ಗ್ರಾಮದಲ್ಲಿ ಡಿಸೆಂಬರ್ 5, 2017 ರಂದು ಘಟನೆ ನಡೆದಿತ್ತು. ಘಟನೆ ನಡೆದ ಮೂರು ದಿನಗಳ ನಂತರ ಆರೋಪಿಯನ್ನು ಡಿಸೆಂಬರ್ 8 ರಂದು ಬಂಧಿಸಲಾಗಿತ್ತು.